ದರ್ಶನ್ ಹಾಗೂ ಅವರ ಗೆಳೆಯರು ಕೆಲವು ದಿನಗಳ ಹಿಂದೆ ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ದಲಿತ ಯುವಕನಿಗೆ ಹೊಡೆದಿದ್ದಾರೆ. ಅವನಿಗೆ ಗಂಭೀರ ಗಾಯಗಳಾಗಿವೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದಾರೆ.
ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಇಂದ್ರಜಿತ್ ಲಂಕೇಶ್, ಮಾಧ್ಯಮಗಳೊಟ್ಟಿಗೆ ಮಾತನಾಡಿ, ”ದರ್ಶನ್ ಹಾಗೂ ಗೆಳೆಯರು ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವ ಪ್ರಕರಣದ ಕೆಲವು ಸಾಕ್ಷ್ಯಗಳನ್ನು ಗೃಹ ಸಚಿವರಿಗೆ ನೀಡಿದ್ದೇನೆ. ಕ್ರಮದ ಭರವಸೆಯನ್ನು ಅವರು ನೀಡಿದ್ದಾರೆ” ಎಂದಿದ್ದಾರೆ.
”ದರ್ಶನ್, ಉಮಾಪತಿ, ಅರುಣಾ ಕುಮಾರಿ ಪ್ರಕರಣ ನಡೆಯುವ ಕೆಲವು ನಾಲ್ಕೈದು ದಿನಗಳ ಹಿಂದೆ ಸಂದೇಶ್ ಪ್ರಿನ್ಸ್ ಹೋಟೆಲ್ ಬಳಿ ದಲಿತ ಯುವಕನ ಮೇಲೆ ತೀವ್ರವಾದ ಹಲ್ಲೆಯನ್ನು ಮಾಡಲಾಗಿದ್ದು, ದರ್ಶನ್, ರಾಕೇಶ್ ಪಾಪಣ್ಣ, ಹರ್ಷ ಮೆಲಂಟ ಅವರುಗಳೇ ಆ ಘಟನೆಯ ರುವಾರಿಗಳು. ಆ ಸಮಯದಲ್ಲಿ ಸ್ಥಳದಲ್ಲಿ ಪವಿತ್ರ ಗೌಡ ಸಹ ಇದ್ದರು” ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಯುವಕನ ಕಣ್ಣಿಗೆ ತೀವ್ರ ಹಾನಿಯಾಗಿದೆ: ಇಂದ್ರಜಿತ್ ಲಂಕೇಶ್
”ಹೊಡೆತ ತಿಂದ ಯುವಕನ ಕಣ್ಣಿಗೆ ತೀವ್ರ ಹಾನಿಯಾಗಿದೆ. ಘಟನೆ ನಡೆದ ಮರುದಿನ ಆ ಯುವಕನ ಪತ್ನಿ ಪೊರಕೆ ಹಿಡಿದುಕೊಂಡು ಹೋಟೆಲ್ ಬಳಿ ಹೋಗಿದ್ದಳು. ಕೊನೆಗೆ ಪ್ರಕರಣವನ್ನು ಹಣಕ್ಕೆ ಸೆಟಲ್‌ಮೆಂಟ್ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳು ನನ್ನ ಬಳಿ ಇವೆ. ಪೊಲೀಸರು ತನಿಖೆ ಮಾಡಲಿಲ್ಲವೆಂದರೆ ನಾನು ಸಾಕ್ಷ್ಯಗಳನ್ನು ಬಹಿರಂಗಪಡಿಸುತ್ತೇನೆ” ಎಂದಿದ್ದಾರೆ ಇಂದ್ರಜಿತ್.
ಮೈಸೂರು ಪೊಲೀಸರೇನು ಬಳೆ ತೊಟ್ಟಿದ್ದಾರಾ? ಇಂದ್ರಜಿತ್ ಪ್ರಶ್ನೆ
ಮೈಸೂರು ಪೊಲೀಸರ ಮೇಲೂ ವಾಗ್ದಾಳಿ ನಡೆಸಿದ ಇಂದ್ರಜಿತ್ ಲಂಕೇಶ್, ”ಮೈಸೂರು ಪೊಲೀಸರೇನು ಬಳೆ ತೊಟ್ಟಿಕೊಂಡಿದ್ದಾರೆಯೇ? ಅಲ್ಲಿನ ಪೊಲೀಸ್ ಸ್ಟೇಷನ್‌ಗಳು ಸೆಟಲ್‌ಮೆಂಟ್ ಅಡ್ಡಾಗಳಾಗಿವೆ. ರಾಕೇಶ್ ಪಾಪಣ್ಣನಿಗಾಗಿ ಕೆಲಸ ಮಾಡುತ್ತಿದ್ದಾರೆಯೇ ಅವರುಗಳು. ಒಬ್ಬ ಸಾಮಾನ್ಯನಿಗೆ ನ್ಯಾಯ ಕೊಡಿಸಲು ಅವರಿಗೆ ಆಗುತ್ತಿಲ್ಲ” ಎಂದಿದ್ದಾರೆ ಇಂದ್ರಜಿತ್ ಲಂಕೇಶ್.
”ಸೆಲೆಬ್ರಿಟಿಗಳು ತಲೆ ಕಡಿಯುತ್ತೀನಿ, ಎದೆ ಸೀಳುತ್ತೀನಿ ಎನ್ನುತ್ತಿದ್ದಾರೆ”
”ಸೆಲೆಬ್ರಿಟಿಗಳು, ತಲೆ ಕಡಿಯುತ್ತೀನಿ, ಎದೆ ಸೀಳುತ್ತೀನಿ ಎಂದು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಇದರಿಂದಲೇ ಗೊತ್ತಾಗುತ್ತಿದೆ ಅವರ ಸಂಸ್ಕೃತಿ. ಸಾಮಾನ್ಯರ ಮೇಲೆ, ಮಹಿಳೆಯರ ಮೇಲೆ ಆಗುತ್ತಿರುವ ಈ ಅನ್ಯಾಯಗಳನ್ನು ಕಂಡು ಸುಮ್ಮನಿರಲಾಗದೆ ಇಂದು ದೂರು ನೀಡಿದ್ದೇನೆ. ಗೃಹ ಸಚಿವರು ಕ್ರಮದ ಭರವಸೆ ನೀಡಿದ್ದಾರೆ” ಎಂದಿದ್ದಾರೆ.
ಆಕೆಯನ್ನು ತೋಟಕ್ಕೆ ಕರೆಸಿಕೊಂಡಿದ್ದು ಏಕೆ: ಇಂದ್ರಜಿತ್
25 ಕೋಟಿ ಹಣ ವಂಚನೆ ಪ್ರಕರಣದ ಬಗ್ಗೆಯೂ ಮಾತನಾಡಿದ ಲಂಕೇಶ್, ”ಅರುಣ್ ಕುಮಾರಿಯನ್ನು ತೋಟದ ಮನೆಗೆ, ಹೋಟೆಲ್‌ಗೆ ಕರೆಸಿಕೊಂಡಿದ್ದು ಏಕೆ? ಆಕೆಯನ್ನು ಇನ್ನೋವಾ ಕಾರಿನಲ್ಲಿ ಬಲವಂತದಿಂದ ಕೂರಿಸಿಕೊಂಡು ರಾಕೇಶ್ ಪಾಪಣ್ಣ, ಹರ್ಷಾ ಮೆಲಂಟಾ ಬೆದರಿಕೆ ಹಾಕಿದ್ದು ಏಕೆ? ನಿರ್ಮಾಪಕ ಹಾಗೂ ನಟನ ನಡುವಿನ ಮನಸ್ಥಾಪಕ್ಕೆ ಆಕೆಯನ್ನು ದಾಳವಾಗಿ ಬಳಸಿಕೊಳ್ಳಲಾಗಿದೆ. ಆ ಘಟನೆಯಲ್ಲಿ ಏನೇನು ಆಗಿದೆ ಎಂಬುದು ನನಗೆ ಗೊತ್ತಿದೆ” ಎಂದಿದ್ದಾರೆ ಇಂದ್ರಜಿತ್.