ಕನ್ನಡ ಚಿತ್ರರಂಗವನ್ನು ಪರಭಾಷಿಕರು ಬಹಳ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಕನ್ನಡದ ಸಿನಿಮಾಗಳು, ಕತೆಗಳ ಆಯ್ಕೆ ಕುರಿತು ಹೆಚ್ಚು ಗಮನ ಕೊಡುತ್ತಿದ್ದಾರೆ. ಕರ್ನಾಟಕದಾಚೆ ಕನ್ನಡ ತಂತ್ರಜ್ಞರು ಮಿಂಚುತ್ತಿರುವ ಸಮಯ ಇದು. ಇದೀಗ, ಕನ್ನಡದ ಖ್ಯಾತ ಬರಹಗಾರ ಟಿಕೆ ದಯಾನಂದ್ ಅವರಿಗೆ ಟಾಲಿವುಡ್‌ನಿಂದ ಅವಕಾಶ ಹುಡುಕಿಕೊಂಡು ಬಂದಿದೆ.
ಬೆಲ್ ಬಾಟಮ್, ಆಕ್ಟ್ 1978 ಅಂತಹ ಚಿತ್ರಗಳಿಗೆ ಕಥೆ-ಸಂಭಾಷಣೆ ರಚಿಸಿರುವ ಟಿಕೆ ದಯಾನಂದ್ ಕೆಲಸ ಮೆಚ್ಚಿಕೊಂಡ ತೆಲುಗಿನ ಖ್ಯಾತ ಸಿನಿಮಾ ನಿರ್ಮಾಪಕ ರೆಡ್ ಕಾರ್ಪೆಟ್ ಹಾಕಿ ಟಾಲಿವುಡ್ ಇಂಡಸ್ಟ್ರಿಗೆ ಸ್ವಾಗತಿಸಿದ್ದಾರೆ.
ತೆಲುಗು ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗಳಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿರುವ ವಾಕಡ್ ಅಪ್ಪರಾವ್ ತಮ್ಮ ಮುಂದಿನ ಚಿತ್ರಕ್ಕಾಗಿ ಟಿಕೆ ದಯಾನಂದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ದಯಾನಂದ್ ಅವರ ಬರವಣಿಗೆ ನೋಡಿ ಮೆಚ್ಚಿಕೊಂಡಿರುವ ಅಪ್ಪರಾವ್, ತೆಲುಗಿನಲ್ಲಿ ಸ್ಕ್ರಿಪ್ಟ್ ಮಾಡಿಕೊಡಲು ಕೇಳಿದ್ದಾರೆ.
ಮಹಿಳಾ ಪ್ರಧಾನ ಚಿತ್ರವೊಂದಕ್ಕೆ ಟಿಕೆ ದಯಾನಂದ್ ಅವರನ್ನು ಕಥೆ, ಚಿತ್ರಕಥೆ, ಸಂಭಾಷಣೆ ಮಾಡಿಕೊಡಲು ಅಪ್ರೋಚ್ ಮಾಡಿದ್ದಾರೆ ಎನ್ನುವ ವಿಷಯ ತಿಳಿದು ಬಂದಿದೆ. ಒನ್ ಲೈನ್ ಕಥೆ ನಿರ್ಮಾಪಕರ ಬಳಿಯಿದ್ದು, ಅದಕ್ಕೆ ಸ್ಕ್ರೀನ್ ಪ್ಲೇ ಮಾಡಿಕೊಡಲು ಟಿಕೆ ದಯಾನಂದ್ ಅವರನ್ನು ಸಂಪರ್ಕಿಸಿದ್ದಾರೆ ತೆಲುಗು ನಿರ್ಮಾಪಕ.
ಆರ್‌ಆರ್‌ಆರ್ ಸಿನಿಮಾದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡ್ತಿರುವ ಸೆಂಥಿಲ್ ಜೊತೆ ಆಪರೇಟಿಂಗ್ ಕ್ಯಾಮೆರಾಮೆನ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ತಂಡ ಈ ಚಿತ್ರ ಮಾಡುತ್ತಿದೆ. ಅಪ್ಪರಾವ್ ವಾಕಡ್ ನಿರ್ಮಾಣ ಮಾಡುತ್ತಿದ್ದಾರೆ. ಬೆಲ್ ಬಾಟಮ್ ಸಿನಿಮಾ ನೋಡಿ ಇಷ್ಟಪಟ್ಟು, ಇದೇ ಬರಹಗಾರರು ಬೇಕು ಎಂದು ನಿರ್ಧರಿಸಿ ಟಿಕೆ ದಯಾನಂದ್ ಅವರನ್ನು ಸಂಪರ್ಕ ಮಾಡಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಮಾಡಿಕೊಡುವ ಜವಾಬ್ದಾರಿ ತೆಗೆದುಕೊಂಡಿರುವ ಟಿಕೆ ದಯಾನಂದ್ ಅವರಿಗೆ ಇದು ಮೊದಲ ತೆಲುಗು ಸಿನಿಮಾ.
ಈ ಮೊದಲೇ ಹೇಳಿದಂತೆ ಮಹಿಳಾ ಪ್ರಧಾನ ಸಿನಿಮಾ. ಸದ್ಯಕ್ಕೆ ಕಥೆ-ಚಿತ್ರಕಥೆ ಮಾಡುವ ಹಂತದಲ್ಲಿ ಚಿತ್ರತಂಡವಿದ್ದು, ನಾಯಕಿ ಆಯ್ಕೆ ಅಂತಿಮವಾಗಿಲ್ಲ. ಸ್ಕ್ರಿಪ್ಟ್ ಕೆಲಸ ಮುಗಿದ ಮೇಲೆ ನಟಿಯನ್ನು ಸೆಲೆಕ್ಟ್ ಮಾಡಿಕೊಳ್ಳಲು ಚಿತ್ರತಂಡ ತಿರ್ಮಾನಿಸಿದೆ.
ಇನ್ನು ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಟಿ.ಕೆ ದಯಾನಂದ್, ನಂತರ ಕನ್ನಡದಲ್ಲಿ ‘ಬೆಂಕಿಪಟ್ಣ’ ಸಿನಿಮಾ ನಿರ್ದೇಶನ ಮಾಡಿದ್ದರು. ಬೆಲ್ ಬಾಟಮ್ 2 ಸಿನಿಮಾದಲ್ಲಿ ಬರಹಗಾರನಾಗಿ ಕೆಲಸ ಮಾಡಿದ್ದು, ಸಿನಿಮಾ ಶುರುವಾಗಬೇಕಿದೆ. ಇದರ ಜೊತೆ ಹೊಸಬರ ಚಿತ್ರವೊಂದಕ್ಕೂ ಸ್ಕ್ರಿಪ್ಟ್ ಮಾಡಿದ್ದಾರೆ. ಈ ನಡುವೆ ತಮ್ಮದೇ ನಿರ್ದೇಶನದಲ್ಲೂ ಸಿನಿಮಾವೊಂದು ಆರಂಭಿಸಲು ತಯಾರಿ ನಡೆಸಿದ್ದಾರೆ.