ಹುಬ್ಬಳ್ಳಿ: ಕೆಆರ್ ಎಸ್ ಡ್ಯಾಮ್ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಆರೋಪ ಮಾಡಿದ್ದಾರೆ. ಅವರು ಆರೋಪ ಮಾಡಿದ ನಂತರ ಸರ್ಕಾರವಾಗಲಿ, ಗಣಿ ಇಲಾಖೆಯಾದರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಬೇಕಾಗಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುಮಲತಾ ಅವರು ತಮ್ಮ ಪುತ್ರನನ್ನು ಸೋಲಿಸಿದ್ದಕ್ಕೆ ಕುಮಾರಸ್ವಾಮಿಯವರು ಆರೋಪಕ್ಕೆ ಮುಂದಾಗಿರಬಹುದು. ಕೆಆರ್ ಎಸ್ ಸುತ್ತಮುತ್ತಲಿನ 20 ಕಿಲೋ ಮೀಟರ್ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಲ್ಲಿ ಜೆಡಿಎಸ್ ನಾಯಕರ ಗಣಿ ಕಂಪನಿಗಳು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿವೆ ಎಂದು ಆರೋಪ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಆಡಳಿತ ಪಕ್ಷ ಭಾಗಿಯಾಗಿರಬಹುದು, ಅದಕ್ಕಾಗಿಯೇ ಸರ್ಕಾರ ಧ್ವನಿ ಎತ್ತುತ್ತಿಲ್ಲ ಎಂದರು.
ನಾನು ಬಾದಾಮಿಯಿಂದ ಶಾಸಕನಾಗಿರುವೆ. ಮುಂದೆ ಬಾದಾಮಿಯಿಂದಲೇ ಸ್ಪರ್ಧಿಸುವೆ. ನನಗೆ ಹಲವು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ಇರೋದು ನಿಜ ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸರ್ಕಾರಕ್ಕೆ ಮಾನ, ಮರ್ಯಾದೆ. ನಾಚಿಕೆ ಏನೂ ಇಲ್ಲ. ಮಾಲಿನ್ಯ ಮಂಡಳಿಯ ವಿಷಯವಾಗಿ 16ಕೋಟಿ ರೂ. ಡೀಲಿಂಗ್ ಮಾಡಿದ್ದು ಸುಳ್ಳಾ? ಸರ್ಕಾರಕ್ಕೆ ಕೋವಿಡ್ ಹೆಸರಿನಲ್ಲಿ ಭ್ರಷ್ಟಾಚಾರ ಮಾಡೋಕೆ ಅನೂಕೂಲವಾಗಿದೆ. ಕೋವಿಡ್ ಸಂದರ್ಭದಲ್ಲಿ ಪ್ರತಿಪಕ್ಷಗಳು ಸಹ ಪ್ರತಿಭಟನೆ ಮಾಡೋಕೆ ಬರಲ್ಲ ಅನ್ನೋದು ಗೊತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ನಮ್ಮಲ್ಲಿ ಬಣಗಳು ಸಹ ಇಲ್ಲ. ಉಪಚುನಾವಣೆ ದಿನಾಂಕ ನಿಗದಿಯಾದ ನಂತರ ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ಜಾತಿ ಸಮೀಕ್ಷೆ ನಡೆದು ಎರಡೂವರೆ ವರ್ಷ ಆಯ್ತು. ಅದರ ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಆ ಕುರಿತು ಸದನದಲ್ಲಿ ಚರ್ಚೆ ಆಗುತ್ತಿಲ್ಲ. ಚರ್ಚೆ ಮಾಡಿದರೆ ಸಾಮಾಜಿಕ ನ್ಯಾಯ ಒದಗಿಸಬೇಕಾಗುತ್ತದೆ. ಹೀಗಾಗಿ ಆ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಸರ್ಕಾರಕ್ಕೆ ಭಯ ಇದೆ ಎಂದರು.
Laxmi News 24×7