ಕಲಬುರ್ಗಿ: ಡಾಂಬರ್ ಕಾಣದ, ತಗ್ಗು ಗುಂಡಿಗಳಿಂದ ಕೂಡಿದ ದೂಳುಮಯ ರಸ್ತೆ, ಮಳೆ ಬಂದರೆ ಸೋರುವ ಜೋಪಡಿಗಳು, ಚರಂಡಿ ಇಲ್ಲದೆ ಎಲ್ಲೆಂದರಲ್ಲಿ ನಿಂತಿರುವ ತ್ಯಾಜ್ಯ ನೀರು…
ನಗರ ಹೊರವಲಯದ ಶಹಾಬಾದ್ ರಸ್ತೆಯಲ್ಲಿನ ಅಲೆಮಾರಿ ಬುಡ್ಗ ಜಂಗಮ ಕಾಲೊನಿಯ ದುಸ್ಥಿತಿ ಇದು.
ರಾಜ್ಯದ ವಿವಿಧ ಭಾಗಗಳಿಂದ ಬಂದು ಕಳೆದ 8 ವರ್ಷಗಳಿಂದ ಇಲ್ಲಿಯೇ ನೆಲೆ ಕಂಡುಕೊಂಡಿರುವ ಬುಡ್ಗ ಜಂಗಮ ಸಮುದಾಯದ 200ಕ್ಕೂ ಹೆಚ್ಚು ಕುಟುಂಬಗಳು ಮೂಲಸೌಲಭ್ಯದಿಂದ ವಂಚಿತವಾಗಿವೆ. ಯಾದಗಿರಿ ಜಿಲ್ಲೆ ಯರಗೋಳ ಗ್ರಾಮದ ಕುಟುಂಬಗಳು ಇಲ್ಲಿ ಹೆಚ್ಚಾಗಿ ನೆಲೆಸಿದ್ದು, ಕನ್ನಡ ಹಾಗೂ ತೆಲುಗು ಭಾಷೆ ಹೆಚ್ಚಾಗಿ ಮಾತನಾಡುತ್ತಾರೆ. ವ್ಯಾಪಾರಕ್ಕೆ ಹಿಂದಿಯನ್ನೂ ಬಳಸುತ್ತಾರೆ.
ಒಂದು ಸಾವಿರಕ್ಕೂ ಹೆಚ್ಚು ನಿವಾಸಿಗಳು ಇದ್ದರೂ, ಇಡೀ ಬಡಾವಣೆಗೆ ಇರುವುದು ಒಂದೇ ಕೊಳವೆಬಾವಿ ಮಾತ್ರ. ವಿದ್ಯುತ್ ಇಲ್ಲದಿದ್ದರೆ ಅಥವಾ ಮೋಟರ್ ದುರಸ್ತಿಗೆ ಬಂದರೆ ದೂರದ ಪ್ರದೇಶಗಳಿಂದ ಕೊಡ ಹೊತ್ತು ನೀರು ತರಬೇಕಾದ ಅನಿವಾರ್ಯತೆ ಇಲ್ಲಿದೆ.
’ದಿನವಿಡೀ ಊರೂರು ಸುತ್ತಿ ರಾತ್ರಿ ಜೋಪಡಿ ಸೇರುತ್ತೇವೆ. ಮಳೆಗಾಲದಲ್ಲಿ ರಾತ್ರಿ ನೆಮ್ಮದಿಯಾಗಿ ನಿದ್ರಿಸಲೂ ಆಗುವುದಿಲ್ಲ. ಜೋಪಡಿಗಳಿಗೆ ಹಾವು- ಚೇಳುಗಳು ನುಗ್ಗುತ್ತವೆ. ಸೊಳ್ಳೆಗಳ ಕಾಟವಂತೂ ಸಹಜವಾಗಿದೆ’ ಎನ್ನುತ್ತಾರೆ ಇಲ್ಲಿನ ನಿವಾಸಿ ಯಲ್ಲಪ್ಪ.
‘ಪ್ಲಾಸ್ಟಿಕ್ ಸಾಮಗ್ರಿ ಹಾಗೂ ಸಾಬೂನು ಮಾರುವುದು ನಮ್ಮ ಜನರ ಬಹುಮುಖ್ಯ ಉದ್ಯೋಗ. ಕೆಲವು ಯುವಕ, ಯುವತಿಯರು ಕಟ್ಟಡ ಕೆಲಸಗಳಿಗೆ ಕೂಲಿ ಹೋಗುತ್ತಾರೆ. ಹೊಟ್ಟೆಪಾಡಿಗಾಗಿ ನಿತ್ಯ ಒಂದಿಲ್ಲೊಂದು ಕೆಲಸ ಮಾಡುತ್ತೇವೆ’ ಎನ್ನುತ್ತಾರೆ ಬುಡ್ಗ ಜಂಗಮ ಸಮುದಾಯದ ಮುಖಂಡ ಮರಿಲಿಂಗಪ್ಪ.
ಬೀದಿ ದೀಪಗಳಿಲ್ಲ: ರಾತ್ರಿಯಾದರೆ ಇಡೀ ಕಾಲೊನಿ ಕತ್ತಲಲ್ಲಿ ಮುಳುಗುತ್ತದೆ. ವಿದ್ಯುತ್ ಕಂಬಗಳಿದ್ದರೂ ದೀಪ ಅಳವಡಿಸಿಲ್ಲ. ಜೋಪಡಿಗಳ ಪಕ್ಕದಲ್ಲೇ ತ್ಯಾಜ್ಯ ನೀರು, ಗಿಡಗಂಟಿಗಳಿರುವುದರಿಂದ ರಾತ್ರಿ ವೇಳೆ ಇಲಿ, ಹೆಗ್ಗಣ, ಹಾವು, ಚೇಳುಗಳ ಭಯ ಶುರುವಾಗುತ್ತೆ. ಜೋಪಡಿಗಳಲ್ಲಿ ಸಣ್ಣ ದೀಪಗಳನ್ನು ಬಳಸುತ್ತೇವೆ. ಆದರೆ ಬೀದಿ ದೀಪಗಳಿಲ್ಲ. ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಿದರೆ ಅನುಕೂಲ ಆಗುತ್ತದೆ ಎಂದು ಬುಡ್ಗ ಜಂಗಮ ಕಾಲೊನಿ ನಿವಾಸಿ ಬಸಪ್ಪ ಮನವಿ ಮಾಡಿದರು.
ಇದ್ದೂ ಇಲ್ಲದಂತಿರುವ ರಸ್ತೆ: ಶಹಾಬಾದ್ ರಸ್ತೆಯ ಎಡಭಾಗದಲ್ಲಿ ಈ ಕಾಲೊನಿಗೆ ತೆರಳಲು ಮಣ್ಣಿನ ರಸ್ತೆ ಇದೆ. ತಗ್ಗುಗುಂಡಿಗಳಿಂದ ಕೂಡಿದ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಓಡಿಸಲು ಸವಾರರು ಪರದಾಡುವ
ಸ್ಥಿತಿ ಇದೆ.
‘ಮಳೆ ಬಂದರೆ ಹಾದಿಯೇ ಕಾಣಲ್ಲ. ಪ್ಲಾಸ್ಟಿಕ್ ಸಾಮಗ್ರಿಗಳಿರುವ ಬೈಕ್ ಓಡಿಸುವಾಗ ಹಲವು ಬಾರಿ ಕೆಸರಿನಲ್ಲಿ ಬಿದ್ದಿದ್ದೇವೆ. ಅನಾರೋಗ್ಯ ಪೀಡಿತರನ್ನು ಹೆಗಲ ಮೇಲೆ ಹೊತ್ತೊಯ್ಯಬೇಕಾದ ದುಸ್ಥಿತಿ ಉಂಟಾಗುತ್ತೆ. ರಸ್ತೆಗೆ ಡಾಂಬರು ಹಾಕಿಸಲು ಜನಪ್ರತಿನಿಧಿಗಳು ಮುಂದಾಗಬೇಕು’ ಎಂದು ಬಡಾವಣೆ ನಿವಾಸಿಗಳು ಒತ್ತಾಯಿಸಿದರು.