ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು, ಲಾಕ್‍ಡೌನ್ ವೇಳೆ ಕಷ್ಟಕ್ಕೆ ಸಿಲಿಕಿದ್ದ ಆಟೋಚಾಲಕನ ನೆರವಿಗೆ ಬಂದಿದ್ದಾರೆ.
ಆಟೋಚಾಲಕನಾಗಿ ಕೆಲಸ ಮಾಡುತ್ತಿದ್ದ ರಿಯಾಜ್ ಲಾಕ್‍ಡೌನ್‍ಗೂ ಮುನ್ನ ತಂಗಿಯ ಮದುವೆ ಫಿಕ್ಸ್ ಮಾಡಿದ್ದರು. ನಂತರದ ದಿನದಲ್ಲಿ ದುಡಿದು ಹಣವನ್ನು ಹೊಂದಿಸಿಕೊಂಡು ತಂಗಿಯ ಮದುವೆ ಮಾಡಲು ಬಯಸಿದ್ದರು. ಆದರೆ ಲಾಕ್‍ಡೌನ್ ಆದ ನಂತರ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲಿಕಿದ್ದರು.
ಲಾಕ್‍ಡೌನ್‍ನಿಂದ ಮದುವೆಯ ಖರ್ಚಿಗೆ ಹಣ ಹೊಂದಿಸುವಲ್ಲಿ ವಿಫಲರಾಗಿದ್ದ ರಿಯಾಜ್, ದಿಕ್ಕು ತೋಚದಂತಾಗಿ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೊರೆ ಹೋಗಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ಮದುವೆಯ ಖರ್ಚನ್ನು ಭರಿಸಲು ಟ್ರಸ್ಟ್ ಸದಸ್ಯರಿಗೆ ಸುದೀಪ್ ಸೂಚನೆ ನೀಡಿದ್ದು, ಸುದೀಪ್ ಅವರ ಸೂಚನೆಯ ಮೇರೆಗೆ ಇಂದು ಈ ಬಡ ಕುಟುಂಬಕ್ಕೆ ಸುದೀಪ್ ಚಾರಿಟೇಬಲ್ ಟ್ರಸ್ಟ್ ಸದ್ಯಸರು 20 ಸಾವಿರ ರೂ. ಹಣವನ್ನು ಹಸ್ತಾಂತರಿಸಿದ್ದಾರೆ.
ಆರ್ಥಿಕ ಸಹಾಯ ಮಾಡಿ ಮದುವೆಗೆ ನೆರವಾಗಿ ಎಂದು ಕೇಳಿಕೊಂಡ ಒಂದೇ ದಿನದಲ್ಲಿ ಸುದೀಪ್ ಬಡಕುಟುಂಬಕ್ಕೆ ನೆರವಾಗಿದ್ದಾರೆ. ಈ ವೇಳೆ ಕುಟುಂಬದ ಸದಸ್ಯರು ಮಾತನಾಡಿ ಲಾಕ್‍ಡೌನ್ ವೇಳೆ ಧನಸಹಾಯ ಮಾಡಿ ನಮ್ಮ ನೆರವಿಗೆ ಬಂದ ಸುದೀಪ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ಜೊತೆಗೆ ತನ್ನ ಮದುವೆಗೆ ನೆರವಾದ ಸುದೀಪ್ ಅವರ ಸಹಾಯವನ್ನು ನೆನೆದು ಆಟೋಚಾಲಕ ತಂಗಿ ನಸ್ರಿನ್ ಭಾವುಕರಾಗಿದ್ದಾರೆ. ಜೊತೆಗೆ ಸುದೀಪ್ ಅಣ್ಣನಿಗೆ ಧನ್ಯವಾದ ಎಂದು ಹೇಳಿದ್ದಾರೆ.
ಈ ಹಿಂದೆಯೂ ಕೂಡ ಸುದೀಪ್ ಚಾರಿಟೇಬಲ್ ಟ್ರಸ್ಟ್ ಕಡೆಯಿಂದ ಈ ರೀತಿಯ ಸಾಮಾಜಿಕ ಕಾರ್ಯಗಳು ಆಗಿವೆ. ಈ ಹಿಂದೆ ಕೂಡ ಲಾಕ್‍ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಬಡ ಜನರಿಗೆ ಸುದೀಪ್ ಟ್ರಸ್ಟ್ ಸಹಾಯ ಹಸ್ತ ಚಾಚಿತ್ತು. ಪೊಲೀಸರ ಸಹಯೋಗದಿಂದ ಟ್ರಸ್ಟ್ ಮೂಲಕ ಅಭಿಮಾನಿಗಳು ಪ್ಯಾಕೆಟ್‍ನಲ್ಲಿ ಆಹಾರವನ್ನು ತಂದು ಅಸಹಾಯಕರು, ವಿಕಲಚೇತನರು ಸೇರಿದಂತೆ ಅನೇಕರಿಗೆ ನೀಡಿದ್ದರು. ಜೊತೆಗೆ ರಸ್ತೆಯಲ್ಲಿರುವ ಶ್ವಾನಗಳಿಗೂ ಊಟ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದರು.
ಲಾಕ್‍ಡೌನ್ ವೇಳೆ ಬೆಂಗಳೂರಿನ ಜೆ.ಜೆ ನಗರ, ಬ್ಯಾಟರಾಯನಪುರ, ಗೋರಿಪಾಳ್ಯ, ಬಂಗಾರಪ್ಪ ನಗರ ಮತ್ತು ಮೈಸೂರು ರಸ್ತೆಯಲ್ಲಿರುವ ಅಸಹಾಯಕರ ಹಸಿವನ್ನು ಸುದೀಪ್ ಚಾರಿಟೇಬಲ್ ಟ್ರಸ್ಟ್ ಸದಸ್ಯರು ನೀಗಿಸಿದ್ದರು. ಜೊತೆಗೆ ಇತ್ತೀಚೆಗಷ್ಟೇ ಬೆಂಗಳೂರಿನ ಬಡ ಸರ್ಕಾರಿ ಶಾಲೆ ಮಕ್ಕಳಿಗೆ ಸುದೀಪ್ ಅವರೇ ಹೋಗಿ ಶೂ ವಿತರಿಸಿ ಬಂದಿದ್ದರು. ಸದ್ಯ ಸುದೀಪ್ ಅವರು ಫ್ಯಾಂಟಮ್ ಸಿನಿಮಾದ ಶೂಟಿಂಗ್‍ನಲ್ಲಿ ನಿರತರಾಗಿದ್ದಾರೆ.