ಕೊಪ್ಪಳ: ಸಚಿವರು ಮತ್ತು ಶಾಸಕರಿಗೆ ಇರುವಂತೆ ನನಗೂ ಓರ್ವ ಆಪ್ತ ಸಹಾಯಕನನ್ನು ನೇಮಕ ಮಾಡಿಕೊಡಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬಳು ಪತ್ರ ಬರೆದಿರುವ ವಿನೂತನ ಪ್ರಸಂಗ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿದ್ದರು ನನ್ನಗೆ ಓದಲು, ಬರೆಯಲು ಬರುವುದಿಲ್ಲ. ಸಂಪೂರ್ಣ ಅನಕ್ಷರಸ್ಥೆಯಾಗಿರುವ ಕಾರಣ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನಗೆ ಸರ್ಕಾರದಿಂದ ಓರ್ವ ಆಪ್ತ ಸಹಾಯಕನನ್ನು ನೇಮಕ ಮಾಡಿ ಕೊಡಿ ಎಂದು ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾ ಶರಣು ಹಾವೇರಿ ಅವರು ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಾನಾ ಅಭಿವೃದ್ದಿ ಕಾರ್ಯಕ್ರಮಗಳನ್ನು ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯತಿ ಮೂಲಕ ಅನುಷ್ಟಾನಗೊಳ್ಳಿಸಬೇಕಾದ ಪ್ರಮುಖ ಜವಬ್ದಾರಿಯು ಗ್ರಾಪಂ ಅಧ್ಯಕ್ಷರ ಮೇಲಿರುತ್ತದೆ. ಆದರೆ ನನಗೆ ಸರ್ಕಾರಿ ಆದೇಶ ಪತ್ರಗಳನ್ನು ಓದಲು, ಬರೆಯಲು ಬರದೇ ಇರುವ ಕಾರಣ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ. ಈ ಕಾರಣದಿಂದ ಸರ್ಕಾರ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಆಡಳಿತ್ಮಾಕ ದೃಷ್ಟಿಯಿಂದ ಓರ್ವ ಆಪ್ತ ಸಹಾಯಕನನ್ನು ನೇಮಕ ಮಾಡುವುದಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ನನ್ನ ಮನವಿಗೆ ಸ್ಪಂದಿಸಬೇಕಾಗಿದೆ ಎಂದು ಶಾಂತಾ ಶರಣು ಕೇಳಿಕೊಂಡಿದ್ದಾರೆ.