ಬೆಂಗಳೂರು: ತಾವು ಆಯ್ಕೆಯಾದ ಕ್ಷೇತ್ರದ ಜನರ ಸಹಾಯಕ್ಕೆ ಕೋವಿಡ್ ಸಂಕಟದ ಸಂದರ್ಭದಲ್ಲಿ ಧಾವಿಸದ ಕಾಂಗ್ರೆಸ್‍ನ ಮಹಾನ್ ನಾಯಕರುಗಳು ಈಗ “ಡೆತ್ ಆಡಿಟ್”ನ ಕುರಿತಾಗಿ ಮಾತನಾಡುತ್ತ ರಾಜ್ಯಾದ್ಯಂತ ಪ್ರವಾಸ ಮಾಡುವ ಹೇಳಿಕೆ ನೀಡಿರುವುದು ರಾಜಕೀಯ ಸೋಗಲಾಡಿತಕ್ಕೆ ಒಂದು ಸ್ಪಷ್ಟ ನಿದರ್ಶನವಾಗಿದೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಟೀಕಿಸಿದ್ದಾರೆ.
ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಸಂತ್ರಸ್ತ ಜನರ ನೆರವಿಗೆ ಧಾವಿಸದ ಕಾಂಗ್ರೆಸ್ ಕೇವಲ ಟ್ವಿಟರ್ ಅಭಿಯಾನದ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಟೀಕಿಸುವುದಕ್ಕಷ್ಟೇ ಸೀಮಿತವಾಗಿದೆ. ಅವರ ರಾಜಕೀಯ ಬೇಜವಾಬ್ದಾರಿತನಕ್ಕೆ ಉದಾಹರಣೆಯಾಗಿದ್ದು, ತಾವು ಆಯ್ಕೆಗೊಂಡ ಕ್ಷೇತ್ರಗಳನ್ನೂ ಭೇಟಿ ಮಾಡದಿರುವ ಅವರ ಹೊಣೆಗೇಡಿತನದಿಂದ ಜನರು ಬೇಸತ್ತಿದ್ದು, ಈಗ ರಾಜಕೀಯ ಕಾರಣಕ್ಕಾಗಿ ಅವರ ರಾಜ್ಯ ಪ್ರವಾಸದ ಚಿಂತನೆ ಮೊಸಳೆ ಕಣ್ಣೀರಿಟ್ಟಂತಾಗಿದೆ ಎಂದಿದ್ದಾರೆ.
ಕೋವಿಡ್‍ಗೆ ಸಂಬಂಧಪಟ್ಟಂತೆ ಪ್ರತಿಯೊಂದು ಪ್ರಕರಣವೂ ಆಧಾರ್ ಸಂಖ್ಯೆಯೊಂದಿಗೆ ದಾಖಲಿಸಲ್ಪಟ್ಟಿದ್ದು, ಪ್ರತಿಯೊಂದು ಕೋವಿಡ್ ಸಾವು ಸರಕಾರಿ ಅಂಕಿ ಅಂಶಗಳಲ್ಲಿ ಲಭ್ಯವಿರುವ ಸಾಮಾನ್ಯ ಸಂಗತಿಯು ಕೂಡ ಕಾಂಗ್ರೆಸ್ ಮಹಾ ನಾಯಕರಿಗೆ ಅರ್ಥವಾಗದಿರುವುದು ದೊಡ್ಡ ದುರಂತ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೋವಿಡ್ ಸಂತ್ರಸ್ತರ ಮತ್ತು ಕೋವಿಡ್‍ನಿಂದ ಮೃತಪಟ್ಟವರ ವಿವರಗಳನ್ನು ಅತ್ಯಂತ ವ್ಯವಸ್ಥಿತವಾಗಿ ಪತ್ತೆ ಹಚ್ಚಿ ದಾಖಲಿಸಲಾಗುತ್ತಿದ್ದು, ಈ ಎಲ್ಲಾ ಅಂಕಿಅಂಶಗಳು ಅಂತರ್ಜಾಲದಲ್ಲಿ ಲಭ್ಯವಿರುತ್ತವೆ. ಕೇಂದ್ರ ಸರಕಾರವು ಕೋವಿಡ್‍ನಿಂದ ಹೆತ್ತವರನ್ನು ಕಳೆದುಕೊಂಡ ಅನಾಥ ಮಕ್ಕಳಿಗಾಗಿ ನೀಡಿರುವ ವಿಶೇಷ ಯೋಜನೆ ಹಾಗೂ ಕರ್ನಾಟಕದಲ್ಲಿ ಕುಟುಂಬದ ಆಧಾರಸ್ತಂಭವಾಗಿದ್ದ ವ್ಯಕ್ತಿ ಕೋವಿಡ್‍ನಿಂದಾಗಿ ಮೃತಪಟ್ಟಲ್ಲಿ ಆ ಕುಟುಂಬದ ರಕ್ಷಣೆಗಾಗಿ ನೀಡಿರುವ ವಿಶೇಷ ಆರ್ಥಿಕ ಸಹಾಯದಿಂದ ವಿಚಲಿತರಾಗಿರುವ ಕಾಂಗ್ರೆಸ್ ಮುಖಂಡರು “ಡೆತ್ ಆಡಿಟ್” ಎನ್ನುವ ಪ್ರಹಸನದೊಂದಿಗೆ ರಾಜ್ಯ ಪ್ರವಾಸ ಮಾಡಲು ಹೊರಟಿರುವುದು “ಊರು ಸೂರೆಗೊಂಡ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ” ಆಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ “ಡೆತ್ ಆಡಿಟ್’ನ ಸೋಗಲಾಡಿತನದ ನಾಟಕ ಪ್ರಹಸನ ಒಂದು ಹಾಸ್ಯಾಸ್ಪದ ಘಟನೆಯಾಗಿದ್ದು ನಾಡಿನ ಜನತೆಯ ಗಮನವನ್ನು ದಾರಿ ತಪ್ಪಿಸುವ ಒಂದು ವ್ಯರ್ಥ ಪ್ರಯತ್ನ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಟೀಕಿಸಿದ್ದಾರೆ.