ಬೆಳಗಾವಿ: ರಾಜ್ಯದಲ್ಲಿ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಜತೆಗೆ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಪಕ್ಷಕ್ಕೆ ಮತ್ತೊಂದು ತಲೆನೋವು ತಂದಿತ್ತು. ಆದರೆ, ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಟ್ಟು ಸ್ವಲ್ಪ ಮಟ್ಟಿಗೆ ಸದ್ಯ ಕಡಿಮೆಯಾಗಿದೆ. ಸಚಿವ ಸ್ಥಾನ ಪಡೆಯಲು ಬಿಜೆಪಿ ಮೇಲೆ ಒತ್ತಡ ತರಲು ಮುಂದಾಗಿದ್ದರು. ಕೆಲ ದಿನಗಳ ಹಿಂದೆ ಮುಂಬೈಗೆ ಹೋಗಿ ಅಲ್ಲಿನ ನಾಯಕರ ಮೂಲಕ ಸಿಎಂ ಮೇಲೆ ಒತ್ತಡ ತರಲು ಮುಂದಾಗಿದ್ದರು. ಆದರೇ ಇದು ಅಷ್ಟಾಗಿ ಫಲಪ್ರದವಾಗಿಲ್ಲ. ಜತೆಗೆ ಆಪ್ತರ ಮೂಲಕ ಸಿಎಂ ಸಹ ವೈಮಸ್ಸು ಬಿಟ್ಟು ಮಾತುಕತೆಗೆ ಬನ್ನಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದೀಗ ಮುಂಬೈನಿಂದ ಗೋಕಾಕ್ ನಗರಕ್ಕೆ ವಾಪಾಸ್ ಆಗಿರೋ ರಮೇಶ್ ಜಾರಕಿಹೊಳಿ ಶೀಘ್ರದಲ್ಲಿಯೇ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಮಾಜಿ ಸಚಿವ ರಮೇಶ ಜಾರಕಿಹೊಳಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಪ್ರಮುಖ ಕಾರಣವಾಗಿದ್ದು, 17 ಜನ ಶಾಸಕರ ಜತೆಗೆ ಮುಂಬೈನಲ್ಲಿ ವಾಸ್ತವ್ಯ ಮಾಡಿ ಸತತ ಪ್ರಯತ್ನದಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ರಚನೆಯಾಗಿದೆ. ಬಳಿಕ ರಮೇಶ್ ಜಾರಕಿಹೊಳಿ ಬಯಸಿದ ಜಲ ಸಂಪನ್ಮೂಲ ಖಾತೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ನೀಡಿದ್ದರು. ಆದರೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡು ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡರು. ಈ ವೇಳೆ ಬಿಜೆಪಿ ಪಕ್ಷದ ನಾಯಕರು ನೆರವಿಗೆ ಬರಲಿಲ್ಲ. ಜಲಸಂಪನ್ಮೂಲ ಇಲಾಖೆಯಲ್ಲಿ ಮಹತ್ವ ನಿರ್ಧಾರವನ್ನು ಸಿಎಂ ಪುತ್ರ ವಿಜಯೇಂದ್ರ ಕೈಗೊಂಡಿದ್ದು ಸಹ ಸಿಟ್ಟಿಗೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಮುಂಬೈ ಹಾರಿದ್ದ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಮೂಲಕ ಸಿಎಂ ಯಡಿಯೂರಪ್ಪನವರ ಮೇಲೆ ಒತ್ತಡ ತರಲು ಮುಂದಾಗಿದ್ದರು. ಆದರೇ ಇದು ಅಷ್ಟೊಂದು ಫಲಕಾರಿಯಾಗಿಲ್ಲ.ಜತೆಗೆ ಅನೇಕ ಶಾಸಕರನ್ನು ಸಹ ಮುಂಬೈನಲ್ಲಿ ಇದ್ದುಕೊಂಡು ರಮೇಶ ಜಾರಕಿಹೊಳಿ ಸಂಪರ್ಕ ಮಾಡಿದ್ದರು. ಈ ಬೆಳವಣಿಗೆ ನಡುವೆ ಸಿಎಂ ಬಿ ಎಸ್ ಯಡಿಯೂರಪ್ಪತಮ್ಮ ಆಪ್ತರ ಮೂಲಕ ರಮೇಶ ಜಾರಕಿಹೊಳಿ ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ಎಲ್ಲಾ ಸಮಸ್ಯೆಯನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸಿಕೊಳ್ಳುವ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸದ್ಯ ರಾಜೀನಾಮೆ ನಿರ್ಧಾರದಿಂದ ರಮೇಶ ಜಾರಕಿಹೊಳಿ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆದರೆ ಸಿಎಂ ಭೇಟಿಯಾಗಿ ತಮ್ಮ ಯಾವೆಲ್ಲ ಬೇಡಿಕೆ ಈಡೇರಿಸಲು ಪಟ್ಟು ಹಿಡಿಯುತ್ತಾರೆ ಎಂಬುದು ಸದ್ಯ ಕಾದು ನೋಡಬೇಕು. ಶೀಘ್ರದಲ್ಲಿಯೇ ಸಿಎಂ ಜತೆಗೆ ರಮೇಶ ಜಾರಕಿಹೊಳಿ ಮಾತಕುತೆ ನಡೆಸಲಿದ್ದಾರೆ ಎಂದು ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಬಿಜೆಪಿ ಸರ್ಕಾರಕ್ಕೆ ಎದುರಾಗಿದ್ದ ಮತ್ತೊಂದು ಆತಂಕ ಸ್ವಲ್ಪ ಕಡಿಮೆಯಾದಂತೆ ಆಗಿದೆ.