ಬೆಂಗಳೂರು: “ಬೆಡ್ ಖಾಲಿ ಇದೆ, ಐಸಿಯು ಖಾಲಿ ಇದೆ ಕೊರೊನಾ ರೋಗಿಗಳೇ ಬನ್ನಿ ಬನ್ನಿ” ಎಂದು ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯೊಂದು ಭರ್ಜರಿ ಆಫರ್ ಕೊಟ್ಟಿದೆ.
ನಗರದಲ್ಲಿ ಶೇ.50ರಷ್ಟು ಬೆಡ್ ಬಿಟ್ಟು ಕೊಡುವುದಕ್ಕೆ ಕಳ್ಳಾಟ ವಾಡುತ್ತಿರುವ ಖಾಸಗಿ ಆಸ್ಪತ್ರೆಯ ಮಧ್ಯೆ ಲಗ್ಗೆರೆಯ ‘ಬೆಥಲ್ ಮೆಡಿಕಲ್ ಮಿಷನ್’ ಆಸ್ಪತ್ರೆ ಸೇವಾ ಮನೋಭಾವ ಹೊಂದಿದೆ. ಈ ಡಿಸೆಂಬರಿನಲ್ಲಿ ಉದ್ಘಾಟನೆಯಾಗಬೇಕಾಗಿದ್ದ ಆಸ್ಪತ್ರೆಯನ್ನು ಸಂಪೂರ್ಣ ಕೊರೊನಾ ರೋಗಿಗಳಿಗೆ ಮೀಸಲಿಟ್ಟಿದೆ.
ಬರೋಬ್ಬರಿ 400 ಬೆಡ್, 12 ಐಸಿಯು ವೆಂಟಿಲೇಟರ್ ಬೆಡ್ ಇಲ್ಲಿ ಲಭ್ಯವಿದೆ. ಕೊರೊನಾ ರೋಗಿಗಳು ರಸ್ತೆ ರಸ್ತೆಯಲ್ಲಿ ಬೆಡ್ ಸಿಗದೇ ಸಾವನ್ನಪ್ಪುತ್ತಿರುವುದನ್ನ, ನರಳಾಡುತ್ತಿರುವುದನ್ನು ನೋಡಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ.
ಸುಸಜ್ಜಿತ ಐದು ಮಳಿಗೆಯ ಆಸ್ಪತ್ರೆ ಸಂಪೂರ್ಣವಾಗಿ ಕೊರೊನಾ ರೋಗಿಗಳಿಗೆ ಇಂದಿನಿಂದ ಮೀಸಲಿಡಲಾಗಿದೆ. ಈ ಖಾಸಗಿ ಆಸ್ಪತ್ರೆ ಸರ್ಕಾರ ನಿಗದಿ ಮಾಡಿದ ದರಕ್ಕಿಂತಲೂ ಕಡಿಮೆ ದರಕ್ಕೆ ಬೆಡ್ ನೀಡಲು ಮುಂದಾಗಿದೆ. ಅವಶ್ಯಕತೆ ಇದ್ದರೆ ಇನ್ನೂ 300 ಬೆಡ್ ವ್ಯವಸ್ಥೆ ಮಾಡುತ್ತೇವೆ ಎಂದು ಭರಸೆ ಕೂಡ ನೀಡಿದೆ.