ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದಂತೆ ಉಚಿತ ಲಸಿಕಾ ಕಾರ್ಯಕ್ರಮದ ಅನ್ವಯ ಜಿಲ್ಲೆಯಾದ್ಯಂತ ಸೋಮವಾರದಿಂದ ಕೋವಿಡ್ ನಿರೋಧಕ ಲಸಿಕೆ ಮೇಳ ಆರಂಭವಾಗಿದೆ. ಆದರೆ, 45 ವರ್ಷ ಮೇಲಿನವರಿಗಷ್ಟೆ ಕೊಡಲಾಗುತ್ತಿದೆ.
18ರಿಂದ 44 ವರ್ಷದ ಎಲ್ಲರಿಗೂ ಲಸಿಕೆ ದೊರೆಯಲಿಲ್ಲ. ಆದ್ಯತಾ ಗುಂಪಿನಲ್ಲಿರುವ 18ರಿಂದ 44 ವರ್ಷದವರಿಗೆ ಯಥಾಪ್ರಕಾರ ಲಸಿಕಾ ಕಾರ್ಯಕ್ರಮ ನಡೆಯಿತು. ಸರ್ಕಾರದ ಘೋಷಣೆ ಆಧರಿಸಿ ಆಸ್ಪತ್ರೆಗಳಿಗೆ ಬಂದಿದ್ದ 18 ವರ್ಷ ಮೇಲಿನ ಯುವಜನರು ಲಸಿಕೆ ದೊರೆಯದೆ ಬರಿಗೈಲಿ ವಾಪಸಾಗಬೇಕಾಯಿತು.
’45 ವರ್ಷ ಮೇಲಿನವರು ಮಾತ್ರ ಲಸಿಕೆ ಮೇಳದಲ್ಲಿ ಲಸಿಕೆ ಪಡೆಯಬಹುದು. ಜಿಲ್ಲಾ ಆಸ್ಪತ್ರೆ, ಎಲ್ಲ ತಾಲ್ಲೂಕು ಆಸ್ಪತ್ರೆ, ಜಿಲ್ಲೆಯ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಕಿಸಿಕೊಳ್ಳಬಹುದು. ಆರೋಗ್ಯ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಇರುವ ಶಾಲೆಗಳಲ್ಲಿ ಕೂಡ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೆ ಬೃಹತ್ ಕೈಗಾರಿಕೆಗಳು, ಕಾರ್ಖಾನೆಗಳಲ್ಲಿ ಕೂಡ ನೀಡಲು ಕ್ರಮ ವಹಿಸಲಾಗುತ್ತಿದೆ. ಆನಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಹಾಗೂ ಆರೋಗ್ಯ ಕೇಂದ್ರಗಳಿಗೆ ಬಂದು ಸ್ಥಳದಲ್ಲೇ ನೋಂದಾಯಿಸಿದವರಿಗೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
’45 ವರ್ಷ ಮೇಲಿನವರಿಗೆ ಮಾತ್ರ ಮೇಳದಲ್ಲಿ ಲಸಿಕೆ ನೀಡಲಾಗುತ್ತದೆ. ಇನ್ನುಳಿದಂತೆ ಆದ್ಯತಾ ಗುಂಪಿನ 18ರಿಂದ 44 ವರ್ಷದವರಿಗೆ ನೀಡಿಕೆ ಮುಂದುವರಿದಿದೆ. ಆಧಾರ್ ಕಾರ್ಡ್ ಅಥವಾ ಅಧಾರ್ ಸಂಖ್ಯೆಯ ಜೊತೆಗೆ ಇತರ ಗುರುತಿನ ದಾಖಲೆಯೊಂದಿಗೆ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬಹುದು. ಜಿಲ್ಲೆಯಲ್ಲಿ ಸದ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಿರುವುದರಿಂದ 45 ವರ್ಷ ಮೇಲಿನವರು ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದರು.
 Laxmi News 24×7
Laxmi News 24×7
				 
		 
						
					 
						
					 
						
					