ಬೆಳಗಾವಿ: ಒಂದೂವರೆ ತಿಂಗಳ ಕಾಲ ಲಾಕ್ ಡೌನ್ ಗ್ರಹವಾಸ ಅನುಭವಿಸಿ ಇನ್ನೇನು ಅನ್ ಲಾಕ್ ಆಗಿ ವಾಹನ ತೆಗೆದುಕೊಂಡು ಹೊರ ಬರಬೇಕೆಂಬ ಖುಷಿಯಲ್ಲಿದ್ದ ಜನರಿಗೆ ಪೆಟ್ರೋಲ್ ದರ ಶಾಕ್ ನೀಡಿದ್ದು, ರವಿವಾರ ಕುಂದಾನಗರಿ ಬೆಳಗಾವಿಯಲ್ಲಿ ಪೆಟ್ರೋಲ್ ದರ ಶತಕದ ಗಡಿ ದಾಟಿದೆ.
ದಿನದಿಂದ ದಿನಕ್ಕೆ ಏರುತ್ತಿರುವ ತೈಲ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನರಿಗೆ ರವಿವಾರ ಬೆಳಗ್ಗೆ 7:00 ಗಂಟೆಗೆ ಬೆಳಗಾವಿಯಲ್ಲಿ ಪ್ರಕಟವಾದ ಪೆಟ್ರೋಲ್ ದರ ಪಟ್ಟಿಯಲ್ಲಿ ನೂರರ ಗಡಿ ದಾಟಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 100.28 ರೂ. ಹಾಗೂ ಡಿಸೇಲ್ ದರ 93.12 ರೂ. ಆಗಿದೆ. ಇದು ದಾಖಲೆಯ ಬೆಲೆ ಏರಿಕೆ ಆಗಿದೆ.
ಕೆಲಸವಿಲ್ಲದೆ ಮನೆಯಲ್ಲಿ ಒಂದೂವರೆ ತಿಂಗಳ ಕಾಲ ಖಾಲಿ ಕುಳಿತಿದ್ದ ಜನರು ಇನ್ನು ಉದ್ಯೋಗ-ವ್ಯಾಪಾರ ನಡೆಸಲು ಹೊರಬರಬೇಕು ಎನ್ನುವಷ್ಟರಲ್ಲಿಯೇ ಪೆಟ್ರೋಲ್ ನ ಹೊಡೆತ ಬಿದ್ದಿದೆ. ಒಂದೆಡೆ ಲಾಕ್ ಡೌನ್ ಹೊಡೆತ, ಇನ್ನೊಂದೆಡೆ ಪೆಟ್ರೋಲ್ ದರ ಹೊಡೆತದಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ.