ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗ ಹಾಗೂ ರಾಜ್ಯದ ಗಡಿ ಭಾಗದಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಗಡಿ ಭಾಗದ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ವೇದಗಂಗಾ ಮತ್ತು ದೂಧಗಂಗಾ ನದಿಯ ಐದು ಸೇತುವೆಗಳು ಮುಳುಗಡೆಗೊಂಡು ಸಂಚಾರ ಕಡಿತಗೊಂಡಿದೆ.
ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಯ ಜತ್ರಾಟ-ಭಿವಶಿ, ಅಕ್ಕೋಳ-ಸಿದ್ನಾಳ, ಭೋಜವಾಡಿ-ಕುನ್ನೂರ ಮತ್ತು ಕಾರದಗಾ-ಭೋಜ ಸೇತುವೆ ಗುರುವಾರ ಬೆಳಗಿನ ಜಾವ ಮುಳುಗಡೆಗೊಂಡು ಸಂಪರ್ಕ ಕಡಿತಗೊಂಡಿವೆ. ದೂಧಗಂಗಾ ನದಿಯ ಚಿಕ್ಕೋಡಿ ತಾಲೂಕಿನ ಮಲಿಕವಾಡ-ದತ್ತವಾಡ ಸೇತುವೆ ಜಲಾವೃತಗೊಂಡಿದೆ. ಗುರುವಾರ ಕೂಡಾ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಭಾರಿ ಮಳೆ ಸುರಿದಿದೆ. ಶುಕ್ರವಾರ ಮತ್ತಷ್ಟು ನದಿಗಳ ನೀರಿನ ಮಟ್ಟದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಇತ್ತ ಚಿಕ್ಕೋಡಿ ತಾಲೂಕಿನಲ್ಲಿಯೂ ಮಳೆ ಅಬ್ಬರದಿಂದ ನದಿಗಳ ನೀರಿನ ಮಟ್ಟದಲ್ಲಿ ಹೆಚ್ಚಳವಾಗುತ್ತಿದೆ. ನದಿ ತೀರದಲ್ಲಿ ನೀರಾವರಿ ಯೋಜನೆಗೆ ಅಳವಡಿಸಿದ ಪಂಪ್ ಸೆಟ್ ನೀರಿನಲ್ಲಿ ಮುಳುಗಡೆಗೊಂಡಿದ್ದು, ರೈತರು ಪಂಪ್‌ಸೆಟ್ ತೆಗೆಯಲು ಹರಸಾಹಸ ಪಡಬೇಕಾಯಿತು.
ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ನೀರು ಹರಿದು ಬರುವುದರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ನಿಪ್ಪಾಣಿ ಭಾಗದಲ್ಲಿ ಬುಧವಾರ ಮತ್ತು ಗುರುವಾರ ನಿಪ್ಪಾಣಿ 141 ಮಿಮೀ, ನಿಪ್ಪಾಣಿ ಎಆರ್ ಎಸ್-115 ಮಿಮೀ, ಸೌಂದಲಗಾ-89 ಮಿಮೀ, ಗಳತಗಾ-64 ಮಿಮೀ ಮಳೆ ಆಗಿದೆ. ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಮಳೆ ಅಬ್ಬರಿಸಿದೆ. ಕೊಯ್ನಾ-251 ಮಿಮೀ, ದೂಮ್-29 ಮಿಮೀ, ವಾರಣಾ-185 ಮಿಮೀ, ದೂಧಗಂಗಾ-200 ಮಿಮೀ, ರಾಧಾನಗರಿ-220 ಮಿಮೀ, ಪಾಟಗಾಂವ-207 ಮಿಮೀ ಮಳೆ ಸುರಿದಿದೆ.
ಹೊಲಗದ್ದೆಗೆ ನುಗ್ಗಿದ ನೀರು: ಮುಂಗಾರು ಹಂಗಾಮು ಆರಂಭದಲ್ಲಿಯೇ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದ ರೈತರು ಮೊಗದಲ್ಲಿ ಮಂದಹಾಸ ಮೂಡಿದೆ. ನದಿ ಪಾತ್ರದ ರೈತರ ಹೊಲಗದ್ದೆಗಳಲ್ಲಿ ವೇದಗಂಗಾ ಮತ್ತು ದೂಧಗಂಗಾ ನದಿ ನೀರು ನುಗ್ಗಿದೆ. ಕಾರದಗಾ, ಭೋಜ, ಜತ್ರಾಟ, ಭೀವಸಿಮ ಮಲಿಕವಾಡ ಮತ್ತು ಯ್ಕಸಂಬಾ ಪರಿಸರದ ವ್ಯಾಪ್ತಿಯಲ್ಲಿ ಕಬ್ಬಿನ ಗದ್ದೆಯಲ್ಲಿ ನೀರು ನುಗ್ಗಿದೆ.