ಬೆಳಗಾವಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಆರಂಭದಲ್ಲೇ ಧಾರಾಕಾರ ಮಳೆಯಾಗುತ್ತಿದೆ. ಮಲೆನಾಡು ಭಾಗ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮೂರು ಸೇತುವೆಗಳು ಜಲಾವೃತವಾಗಿದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ವರ್ಷಧಾರೆಯಿಂದ, ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಪರಿಣಾಮ ಮೂಡಲಗಿ ತಾಲೂಕಿನ ಹಲವು ಸೇತುವೆಗಳು ಜಾಲಾವೃತಗೊಂಡಿವೆ. ತಾಲೂಕಿನ ಸುಣಧೋಳಿ, ಕಮಲದಿನ್ನಿ, ಅವರಾದಿ ಸೇತುವೆಗಳು ಈಗಾಗಲೇ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಇದೇ ರೀತಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ತಾಲೂಕಿನ ಹುಣಶ್ಯಾಳ ಪಿ.ವೈ ಹಾಗೂ ಢವಳೇಶ್ವರ ಸೇತುವೆಗಳು ಮುಳುಗುವ ಸಾಧ್ಯತೆ ಇದೆ.
ಮನೆಗಳಿಗೆ ನುಗ್ಗಿದ ನೀರು
ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆ ಮುಂದುರಿದಿದ್ದು, ವಡಗಾವಿಯ ವಿಷ್ಣುಗಲ್ಲಿ ಸಮೀಪದ ನಿಜಾಮಿಯಾ ನಗರದಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಗದ್ದೆಗೆ ಉರುಳಿದ ಕ್ರೂಸರ್
ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರಾಕಾರ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಪ್ಯಾಸೆಂಜರ್ ಕ್ರೂಸರ್ ಗದ್ದೆಗೆ ಉರುಳಿ ಬಿದ್ದಿದ್ದು, ವಾಹನದಲ್ಲಿದ್ದ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಧಾರವಾಡ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಧಾರವಾಡದ ಸೋಮಾಪುರದಿಂದ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮಕ್ಕೆ ವಾಹನದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಬಳಿ ರಾಷ್ಟ್ರೀಯ ಹೆದ್ದಾರಿ -4ರಲ್ಲಿ ಅಪಘಾತ ಸಂಭವಿಸಿದೆ.
ಇತ್ತ ಹುಬ್ಬಳ್ಳಿ ಜಿಲ್ಲೆಯ ಹಲವು ಭಾಗಗಳಲ್ಲಿ ಮುಂಜಾನೆಯಿಂದಲೇ ಮಳೆ ಆರಂಭವಾಗಿದ್ದು, ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಹುಬ್ಬಳ್ಳಿ, ಧಾರವಾಡ, ಕಲಘಟಗಿ ತಾಲೂಕುಗಳಲ್ಲಿ ಮಳೆ ಹೆಚ್ಚಾಗಿದ್ದು, ನಿರಂತರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.