ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್ ಭಾಗಶಃ ಸಡಿಲಿಕೆ ಮಾಡಲಾಗಿದ್ದು, ನಗರದಲ್ಲಿ ಸೋಮವಾರ ಬಹುತೇಕ ಕಡೆ ಜನ ಸಂದಣಿ ಹೆಚ್ಚಾಗಿತ್ತು.
ನಗರದ ಮೆಜೆಸ್ಟಿಕ್, ಯಶವಂತಪುರ, ಪೀಣ್ಯ, ಚಾಮರಾಜಪೇಟೆ, ಸ್ಯಾಟ್‌ಲೈಟ್ ನಿಲ್ದಾಣ ಹಾಗೂ ಇತರೆ ಪ್ರದೇಶಗಳಲ್ಲಿ ಜನರು ಗುಂಪು ಸೇರಿ ಓಡಾಡಿದ್ದು ಕಂಡುಬಂತು.
ಲಾಕ್‌ಡೌನ್‌ನಿಂದಾಗಿ ನಗರ ತೊರೆದು ತಮ್ಮೂರಿಗೆ ಹೋಗಿದ್ದ ಸಾವಿರಾರು ಮಂದಿ ರೈಲು ಹಾಗೂ ಖಾಸಗಿ ವಾಹನಗಳ ಮೂಲಕ ಬೆಂಗಳೂರಿಗೆ ಸೋಮವಾರ ವಾಪಸು ಬಂದರು. ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಂತೂ ಜನ ಜಾತ್ರೆಯೇ ಇತ್ತು. ಗಂಟುಮೂಟೆ ಹೊತ್ತುಕೊಂಡು ಜನರು ನಿಲ್ದಾಣದಿಂದ ಹೊರಬಂದರು.
ನಿಲ್ದಾಣ ಎದುರು ಆಟೊ, ಟ್ಯಾಕ್ಸಿ ಹಾಗೂ ಖಾಸಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆಟೊದಲ್ಲಿ ಇಬ್ಬರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಆದರೆ, ಅದಕ್ಕಿಂತಲೂ ಹೆಚ್ಚಿನ ಜನ ಆಟೊದಲ್ಲಿ ಸಂಚರಿಸಿದರು. ಕೆಲವರು ವಾಹನ ಸಿಗದೇ ನಡೆದುಕೊಂಡೇ ಸಾಗಿದರು.
‘ಕೆಲಸ ಮಾಡಿದರೆ ಹೊಟ್ಟೆ ತುಂಬುತ್ತದೆ. ಕೆಲಸ ಇಲ್ಲದಿದ್ದರಿಂದ ಊರಿಗೆ ಹೋಗಿದ್ದೆವು. ಈಗ ಕೆಲಸ ಇರುವುದಾಗಿ ಮಾಲೀಕರು ಕರೆ ಮಾಡಿ ಹೇಳಿದರು. ಅದಕ್ಕಾಗಿ ಸ್ನೇಹಿತರೆಲ್ಲರೂ ವಾಪಸು ಬಂದಿದ್ದೇವೆ’ ಎಂದು ಉತ್ತರ ಪ್ರದೇಶದ ಮನ್ವೀತ್ ಹೇಳಿದರು.
ಮಾರುಕಟ್ಟೆಯಲ್ಲೂ ಸಂದಣಿ: ನಗರದ ಮಾರುಕಟ್ಟೆಯಲ್ಲೂ ಜನಸಂದಣಿ ಇತ್ತು. ಅಂತರ ಮರೆತ ಜನ, ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿಬಿದ್ದರು.
ದಿನಸಿ, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅವಕಾಶ ಕಲ್ಪಿಸಲಾಗಿದೆ. ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ, ಶಿವಾಜಿನಗರ, ಎಸ್‌ಪಿ ರಸ್ತೆ, ಮೆಜೆಸ್ಟಿಕ್ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು.
Laxmi News 24×7