ನವದೆಹಲಿ:ಮುಂಬರುವ 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ, ಆಪ್ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಸೋಮವಾರ(ಜೂನ್ 14) ಘೋಷಿಸಿದ್ದಾರೆ.
2022ರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಅಹಮದಾಬಾದ್ ನಗರಕ್ಕೆ ಕೇಜ್ರಿವಾಲ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಗುಜರಾತ್ ನ ಜನರು ಒಂದು ವೇಳೆ ದೆಹಲಿಯಲ್ಲಿ ಉಚಿತ ವಿದ್ಯುತ್ ನೀಡುತ್ತಾರೆ ಎಂದಾದರೆ ಗುಜರಾತ್ ನಲ್ಲಿ ಯಾಕಾಗಬಾರದು ಎಂದು ಆಲೋಚಿಸಬಹುದು. ಅದೇ ರೀತಿ ಕಳೆದ 70 ವರ್ಷಗಳಿಂದ ಇಲ್ಲಿನ ಆಸ್ಪತ್ರೆಗಳ ವ್ಯವಸ್ಥೆಯೂ ಸುಧಾರಿಸಿಲ್ಲ. ಆದರೆ ಈಗ ಆಲೋಚನೆಗಳು ಬದಲಾಗಬಹುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟೂರು ಗುಜರಾತ್ ಗೆ ಭೇಟಿ ನೀಡುವ ಬಗ್ಗೆ ಈ ಮೊದಲೇ ಅರವಿಂದ್ ಕೇಜ್ರಿವಾಲ್ ಗುಜರಾತಿ ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದು, ಗುಜರಾತ್ ಈಗ ಬದಲಾಗಲಿದೆ ಎಂದು ಹೇಳಿದ್ದರು.
ಕೇಜ್ರಿವಾಲ್ ತಮ್ಮ ಭೇಟಿಯ ವೇಳೆ ಗುಜರಾತ್ ನ ಅಹಮದಾಬಾದ್ ನಲ್ಲಿ ಪಕ್ಷದ ಕಚೇರಿಯನ್ನು ಉದ್ಘಾಟಿಸಲಿದ್ದಾರೆ ಎಂದು ವರದಿ ತಿಳಿಸಿದೆ. ಆಮ್ ಆದ್ಮಿ ಪಕ್ಷ ಈಗಾಗಲೇ ಗುಜರಾತ್ ನ ಸ್ಥಳೀಯ ಪಂಚಾಯತ್, ಮಹಾನಗರ ಪಾಲಿಕೆ, ಜಿಲ್ಲಾ, ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹಲವು ಮಂದಿ ಗೆಲುವು ಸಾಧಿಸಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದರು.
Laxmi News 24×7