ಬೆಂಗಳೂರು: ಕೊರೊನಾ ವೈರಸ್ ಮತ್ತು ಲಾಕ್‍ಡೌನ್‍ನಿಂದ ಉಂಟಾಗಿರುವ ಕಷ್ಟದ ಪರಿಸ್ಥಿತಿಯಲ್ಲಿ ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಅವರು ಎಲ್ಲರಿಗೂ ಧೈರ್ಯ ತುಂಬಲು ಇನ್‍ಸ್ಟಾಗ್ರಾಮ್‍ನಲ್ಲಿ ಹೊಸ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ಕೆಲವು ವಿಚಾರಗಳನ್ನು ಬರೆದುಕೊಂಡಿದ್ದಾರೆ.
ಕೊರೊನಾ ವೈರಸ್ ಹಾವಳಿಯಿಂದ ಅನೇಕರ ಬದುಕು ತತ್ತರಿಸಿ ಹೋಗಿದೆ. ಈ ಕಠಿಣ ಸಂದರ್ಭದಲ್ಲಿ ಅನೇಕ ನಟ, ನಟಿಯರು ಸಹಾಯ ಮಾಡಿದ್ದಾರೆ. ನಟ ಯಶ್ ಇತ್ತೀಚೆಗಷ್ಟೇ ಅವರು 1.5 ಕೋಟಿ ರೂ.ಗಿಂತಲೂ ಹೆಚ್ಚು ಹಣವನ್ನು ಸಿನಿಮಾರಂಗದ ಕಾರ್ಮಿಕರಿಗೆ, ತಂತ್ರಜ್ಞರಿಗೆ ಮತ್ತು ಕಲಾವಿದರಿಗೆ ಹಂಚಿದ್ದಾರೆ. ಅದರ ಬೆನ್ನಲ್ಲೇ ನಟಿ ರಾಧಿಕಾ ಪಂಡಿತ್ ಅವರು ಭರವಸೆಯ ಮಾತುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದು ಕಷ್ಟದ ಸಮಯ. ನಾವೆಲ್ಲರೂ ತುಂಬ ನೋವು ಅನುಭವಿಸಿದ್ದೇವೆ. ಆತ್ಮೀಯರನ್ನು ಕಳೆದುಕೊಂಡಿದ್ದೇವೆ. ನಮ್ಮೆಲ್ಲರಿಗೂ ಭಯ, ಹತಾಶೆ ಕಾಡುತ್ತಿದೆ. ನಾಳೆ ಏನಾಗುತ್ತದೋ ಎಂಬ ಆತಂಕ ಇದೆ ಎಂಬುದು ನನಗೆ ತಿಳಿದಿದೆ. ಆದರೆ ದಯವಿಟ್ಟು ಒಂದು ಮಾತನ್ನು ಪ್ರತಿ ದಿನ ನಿಮಗೆ ನೀವೇ ಹೇಳಿಕೊಳ್ಳಿ. ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ನಾವು ಭರವಸೆ ಇಡುತ್ತೇವೆ, ನಂಬಿಕೆ ಇಡುತ್ತೇವೆ, ಜೊತೆಯಾಗಿ ಹೋರಾಡುತ್ತೇವೆ. ಎಲ್ಲರೂ ಜೊತೆಯಾಗಿ ನಿಂತು ಈ ಕಷ್ಟದಿಂದ ಹೊರಬರುತ್ತೇವೆ ಎಂದು ಬರೆದುಕೊಂಡು ಮಕ್ಕಳ ಜೊತೆಗೆ ಸಮುದ್ರ ತಟದಲ್ಲಿ ಕುಳಿತು ಕ್ಲೀಕ್ಕಿಸಿರುವ ಫೋಟೋವನ್ನು ಹಂಚಿಕೊಂಡು ಧರ್ಯ ತುಂಬುವ ಮಾತುಗಳನ್ನಾಡಿದ್ದಾರೆ.
ನನ್ನೆಲ್ಲ ಪ್ರೀತಿಯ ಹಿತೈಷಿಗಳು ಮತ್ತು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸಾಧ್ಯವಾಗದೇ ಇರುವುದಕ್ಕೆ ಕ್ಷಮೆ ಕೇಳುತ್ತೇನೆ. ನಿಮ್ಮಲ್ಲಿ ನಗು ಮೂಡಿಸಲು ಇನ್ಮುಂದೆ ಖುಷಿಯಾದ ಪಾಸಿಟಿವ್ ಪೋಸ್ಟ್ಗಳನ್ನು ಹಾಕುತ್ತೇನೆ ಎಂದು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಿದ್ದ ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಪೋಸ್ಟ್ಗಳನ್ನು ಪ್ರಕಟಿಸುತ್ತಿರಲಿಲ್ಲ. ಈ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳಿದ್ದರು. ಅದಕ್ಕಾಗಿ ಅವರು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.