ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಬಿ. ಜಯಾ ಅವರು ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಗುರುವಾರ (ಜೂ.3) ನಿಧನರಾಗಿದ್ದಾರೆ. ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದಿದ್ದ ಜಯಾ, ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಹಾಸ್ಯನಟಿ ಎಂದು ಜನಪ್ರಿಯರಾಗಿದ್ದರು. ರಂಗಭೂಮಿಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಜಯಾ ಇತ್ತೀಚಿನ ದಿನಗಳಲ್ಲಿ ಕೆಲವು ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು.
ಇಂತಹ ಜನಪ್ರಿಯ ನಟಿ ಅಗಲಿಕೆ ಸುದ್ದಿ ಅಭಿಮಾನಿಗಳ ಪಾಲಿಗೆ ದುಃಖಕರ. ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಬದುಕಿನ ಕೊನೇವರೆಗೂ ಕಲಾ ಸೇವೆಯಲ್ಲೇ ಬದುಕು ಸವೆಸಿದ ಈ ಮಹಾನ್ ನಟಿ ನಿಧನದ ಬಳಿಕ ಅಂತ್ಯಸಂಸ್ಕಾರಕ್ಕೂ ಮುನ್ನಾ ಇವರ ಶವವನ್ನ ಕಸದ ರಾಶಿ ಪಕ್ಕದಲ್ಲಿ ಇಟ್ಟು ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಇದಕ್ಕೆ ಪುಷ್ಟೀಕರಿಸುವ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಏನಿದೆ?: ಚಾಮರಾಜಪೇಟೆ ಟಿಆರ್ ಮಿಲ್ ಸಮೀಪ ರಸ್ತೆಬದಿಯ ಕಸದ ರಾಶಿ ಪಕ್ಕದಲ್ಲೇ ಬಿ.ಜಯಾ ಅವರ ಮೃತದೇಹ ಇದೆ. ಇದರ ಪಕ್ಕದಲ್ಲೇ ನಿಂತ ಮೂರ್ನಾಲ್ಕು ಜನರು ಶವ ತೋರಿಸುತ್ತಾ, ‘ಸಿನಿಮಾ ಉದ್ಯಮದವು ಏನ್ ಮಾಡ್ತೀದ್ದೀರಿ, ಬನ್ನಿ ಈ ತಾಯಿಯನ್ನ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಿ. ನೀವೇನೂ ಒಂದು ಪೈಸೆ ಹಣ ಕೊಡಬೇಕಿ. ನಾವೇ ಖರ್ಚು ಮಾಡ್ತೀವಿ. ನಮ್ಮಿಂದೆ ನಿಲ್ಲಿ ಸಾಕು… ಚುನಾವಣೆ ವೇಳೆ ಓಡೋಡಿ ಬರುವ ರಾಜಕಾರಣಿಗಳೇ ಇತ್ತ ನೋಡಿ, ಹಿರಿಯ ಕಲಾವಿದೆಗೆ ಕೊಡೋ ಗೌರವ ಇದ್ಹೇನಾ?.. ಕಸದ ರಾಶಿ ಇದೆ. ಇಲ್ಲಿಯೇ ಅವರ ಮೃತದೇಹ ಇಟ್ಟೀದ್ದೀರಿ…’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದು ತಿಂಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದ ಜಯಾ ಹಾಸಿಗೆ ಹಿಡಿದಿದ್ದರು. ಬಳಿಕ ಕುಟುಬಂಸ್ಥರು ಮಾರತ್ತಹಳ್ಳಿಯ ಕರುಣಾಶ್ರಯ ಆಶ್ರಮಕ್ಕೆ ಸೇರಿತ್ತು. ಇದಾದ ಮರುದಿನವೇ ಜಯಾ ಅವರು ಕೊನೆಯುಸಿರೆಳೆದಿದ್ದರು.
ಮೂರು ತಲೆಮಾರಿನ ನಟ, ನಟಿಯರೊಂದಿಗೆ ಅಭಿನಯಿಸಿರುವ ಹೆಗ್ಗಳಿಕೆ ಜಯಾ ಅವರದ್ದು. ಎತ್ತರದಲ್ಲಿ ಕೊಂಚ ಕುಳ್ಳಗಿದ್ದ ಜಯಾ ಅವರು ಕುಳ್ಳಿ ಜಯಾ ಎಂದೇ ಜನಪ್ರಿಯರಾಗಿದ್ದರು. ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದಿದ್ದರು. ಡಾ.ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಹಲವಾರು ದಿಗ್ಗಜ ನಟರ ಜತೆ ಅಭಿನಯಸಿದ್ದರು.