Breaking News

ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗಿ : ರಾಜ್ಯ ಸರಕಾರಕ್ಕೆ ಮಾಜಿ ಸಚಿವೆ ಉಮಾಶ್ರೀ ಮನವಿ

Spread the love

ಮಹಾಲಿಂಗಪುರ : ಕಾರ್ಮಿಕ ಇಲಾಖೆಯಲ್ಲಿ ನೇಕಾರರನ್ನು ಕಾರ್ಮಿಕರು ಅಂತಾ ಸೇರಿಸಿ. ಪಾವರ್‌ ಲೂಮ್ ನೇಕಾರರಿಗೆ ಕನಿಷ್ಠ ಮೂರು ವರ್ಷ ನಿರಂತರ ಉಚಿತ ವಿದ್ಯುತ್ ನೀಡಬೇಕು. ಆ ನಿಟ್ಟಿನಲ್ಲಿ ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗಿ ಎಂದು ಮಾಜಿ ಸಚಿವೆ ಉಮಾಶ್ರೀ ಸರಕಾರಕ್ಕೆ ಮನವಿ ಮಾಡಿದರು.

ಶುಕ್ರವಾರ ಪಟ್ಟಣದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೃಹತ್ ಕೈಗಾರಿಕೆ ಹೊರತುಪಡಿಸಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ನಿರ್ಜೀವವಾಗಿವೆ. ಅನೇಕರು ನೇಣಿಗೆ ಶರಣಾಗಿದ್ದಾರೆ. ಮಾಧ್ಯಮಗಳ ಮುಖಾಂತರ ಕೆಲವು ಮಾತ್ರ ಬೆಳಕಿಗೆ ಬಂದಿವೆ. ಆರ್ಥಿಕ ಹಿನ್ನೆಡೆ ದೇಶ ಮಾತ್ರ ಆನುಭವಿಸುತ್ತಿಲ್ಲ. ಜನಸಾಮಾನ್ಯರೂ ಅನುಭವಿಸುತ್ತಿದ್ದು ಅದರಲ್ಲಿ ವಿವಿಧ ನೇಕಾರರೂ ಕೂಡಾ ಇದ್ದಾರೆ. ನೇಕಾರಿಕೆ ಉದ್ಯಮ ಪುನಶ್ಚೇತನಕ್ಕೆ ಸರ್ಕಾರ ಮುಂದೆ ಬರಲಿಲ್ಲ ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯುತ್ ಚಾಲಿತ ಮಗ್ಗಗಳ ಮಾಲಿಕರು ಹಾಕಿದ ಬಂಡವಾಳ ತುಕ್ಕು ಹಿಡಿದಿದೆ. ಈಗಾಗಲೇ ನೇಯ್ದ ಬಟ್ಟೆಯನ್ನು ಯಾರೂ ಖರೀದಿಸುತ್ತಿಲ್ಲ. ಮೊದಲು ಪವರಲೂಮ್‌ನಲ್ಲಿ ದಿನಕ್ಕೆ 3 ಸೀರೆ ನೇಯುತ್ತಿದ್ದ ನೇಕಾರನಿಗೆ ಗಂಜಿಯಾದರೂ ಸಿಗಲಿ ಎಂದು ಮಾಲಿಕರು 1 ಸೀರೆಯನ್ನಾದರೂ ನೇಯಲಿ ಎಂದು ಹೇಳಬೇಕೆಂದರೆ ನೂಲು, ಚಮಕಾ, ಬಣ್ಣ ಸಿಗುತ್ತಿಲ್ಲಾ. ಇದನ್ನೇ ನಂಬಿ ಬದುಕುವ ನೇಕಾರ ಏನು ಮಾಡಬೇಕು ಎಂದು ಸರಕಾರದ ವಿರುದ್ಧ ಕಿಡಿಕಾರಿದರು.

ಅನೇಕ ಅವಕಾಶಗಳಿದ್ದರೂ ಸರ್ಕಾರ ಉದ್ಯಮವನ್ನು ಪುನ:ಶ್ಚೇತನ ಮಾಡಲು ಮುಂದೆ ಬರಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಬರ, ಅತಿವೃಷ್ಠಿ, ಅನಾವೃಷ್ಠಿ ಇತ್ತಾದರೂ ಅವರು ಸಹಾಯಕ್ಕೆ ಧಾವಿಸಿದರು. ಸಾಲ ಮನ್ನಾ ಮಾಡಿದರು, ಖಾಸಗಿಯವರು ಯಾರೂ ಸಾಲ ವಾಪಸಾತಿಗೆ ಒತ್ತಾಯಿಸಬೇಡಿಯೆಂದು ತಾಕೀತು ಮಾಡಿದರು. ಆದರೆ ಇಂದು ಅದಕ್ಕಿಂತ ಕಠಿಣ ಪರಸ್ಥಿತಿ ರಾಜ್ಯದಲ್ಲಿ ಇದೆ. ಇಂದಿನ ಸರ್ಕಾರ ಏನು ಮಾಡ್ತಿದೆ. ಯಡಿಯೂರಪ್ಪನವರೆ ನೀವು ಮಹಾನ್ ನಾಯಕರು, ನೇಕಾರರ ಬಗ್ಗೆ ಬಹಳಷ್ಟು ಪ್ರೀತಿ ಉಳ್ಳವರು. ಆದರೆ ಪ್ಯಾಕೇಜ್ ಘೋಷಣೆ ಮಾಡುವಾಗ ನೇಕಾರರ ನೆನಪಾಗುವದಿಲ್ಲವೆ ಎಂದು ಸರಕಾರದ ವಿರುದ್ಧ ಗುಡುಗಿದರು. ಕಳೆದ ವರ್ಷವೂ ಹೀಗೆ ಮಾಡಿದ್ದೀರಿ. ಈ ಬಾರಿಯೂ ನೆನಪಾಗಲಿಲ್ಲ. ಶಾಸಕರು ಬಂದು ನಿಮಗೆ ನೆನಪು ಮಾಡಬೇಕು. ನಿಮ್ಮ ಭಾಷಣದಲ್ಲಿ ನೇಕಾರರ ಬಗ್ಗೆ ಎಷ್ಟು ಕನಿಕರ, ಪ್ರೀತಿ ತೋರಿಸುತ್ತೀರಿ ಅದೇ ಪ್ಯಾಕೇಜ್ ಘೋಷಣೆ ಮಾಡುವಾಗ ನೇಕಾರರ ನೆನಪಾಗಲಿಲ್ಲವೆ. ನಿಮ್ಮ ಸುತ್ತಲಿದ್ದವರು ಯಾಕೆ ನೆನಪಿಸಲಿಲ್ಲ. ಇದರ ಅರ್ಥ ಚುನಾವಣೆಯಲ್ಲಿ ಮತ ಗಳಿಸಲಿಲು ಮಾತ್ರ ನೇಕಾರರು ಬೇಕು ಆದರೆ ಕೃತಿಯಲ್ಲಿ ಅಲ್ಲ ಎಂದರು.

ನೇಕಾರರಿಗೆ ಈಗ 2 ಸಾವಿರ ಕೊಡ್ತೀನಿ ಅಂತಿರಿ. ಆದರೆ ಪ್ರತಿ ನೇಕಾರ ಕುಟುಂಬಕ್ಕೆ 10 ಸಾವಿರ ಕೊಡಬೇಕು. ನೇಕಾರರಿಗೆ ಮಾತ್ರ ಅಲ್ಲ. ಟ್ಯಾಕ್ಸಿ, ರಿಕ್ಷಾ ಚಾಲಕರಿಗೆ, ಅಸಂಘಟಿತ ಕಾರ್ಮಿಕರಿಗೆ ,ಸವಿತಾ ಸಮಾಜ, ಕುಂಬಾರ, ಕಮ್ಮಾರ ಸಮಾಜ ಹೀಗೆ ಎಲ್ಲ ಕಾಯಕ ಜೀವಿಗಳಿಗೆ 10 ಸಾವಿರ ರೂ.ಕೊಡಿ. ಕೈ ಮುಗಿದು ಕೇಳುತ್ತೇವೆ ಎಂದು ಮನವಿ ಮಾಡಿದರು.. ಎಲ್ಲ ತರಹದ ನೇಕಾರರಿಗೆ ಅಂದಾಜು ೮೦೦ ರಿಂದ ೯೦೦ ಕೋಟಿ ಘೋಷಣೆ ಮಾಡಿ ಅಥವಾ ಯೋಜನೆಗಳನ್ನು ಸೃಷ್ಠಿ ಮಾಡಿ, ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು, ಬಾಕಿ ಇರುವ ಸಬ್ಸಿಡಿ ಬಿಡುಗಡೆ ಮಾಡಬೇಕು. ಒಂದು ವರ್ಷದ ವರೆಗೆ ಸಾಲದ ಅಸಲು ಬಡ್ಡಿ ಕೇಳಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ರಬಕವಿಯ ವಿದ್ಯುತ್ ಚಾಲಿತ ಮಗ್ಗಗಳ ಅಧ್ಯಕ್ಷ ನೀಲಕಂಠ ಮುತ್ತೂರ, ಮಲ್ಲಪ್ಪ ಭಾವಿಕಟ್ಟಿ, ರಾಜೇಂದ್ರ ಭದ್ರನ್ನವರ, ಶಂಕರ ಸೊನ್ನದ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ,ನಗರ ಘಟಕದ ಅಧ್ಯಕ್ಷ ಈಶ್ವರ ಚಮಕೇರಿ,ಪುರಸಭೆ ಸದಸ್ಯ ಜಾವೇದ ಬಾಗವಾನ, ರಾಜು ಭಾವಿಕಟ್ಟಿ, ಸತ್ಯಪ್ಪ ಮಗದುಮ್, ಹೊಳೆಪ್ಪ ಬಾಡಗಿ,ವಿಠ್ಠಲ ಸಂಶಿ, ಶಿವಾನಂದ ಗಾಳಿ ಮುಂತಾದವರು ಇದ್ದರು.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ