ಕಾರವಾರ: ಕೊರೊನಾ ವಿಚಾರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ. ಬಿಜೆಪಿಯವರು ಹೆಣದ ಮೇಲೆ ಹಣ ಮಾಡುವವರು. ಶವದ ಮೇಲೆ ಕುಳಿತು ಊಟ ಮಾಡುವವರು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರಿಗೆ ಯಾವುದೇ ನಾಚಿಕೆ, ಮಾನಮರ್ಯಾದೆ ಇಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜ್ಯ ಸರ್ಕಾರ ಇಂಥ ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇದು ಕಾಂಗ್ರೆಸ್ ಪಕ್ಷದ ಆರೋಪವಲ್ಲ ಎಂದರು.
ಕೊರೊನಾ ಸಂದರ್ಭದಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಲ್ಲ ಎಂದು ಬೆಂಗಳೂರು ಹೈಕೋರ್ಟ್ ಚಾಟಿ ಬೀಸಿದ ಬಳಿಕ ಸರ್ಕಾರ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಆಯುಕ್ತರನ್ನು ಬದಲಿಸಿದೆ. ಸರ್ಕಾರ ಶ್ವೇತಪತ್ರ ಹೊರಡಿಸಿ ಹೈಕೋರ್ಟ್ ನ್ಯಾಯಾದೀಶರಿಂದ ತನಿಖೆ ಮಾಡಬೇಕು. ಭ್ರಷ್ಟಾಚಾರ ಮಾಡಿದವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಆಗ್ರಹಿಸಿದರು.
ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಎಸ್‍ವೈ ಅವರ ಬಗ್ಗೆ ಅನುಕಂಪ ಹೊಂದಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರಿಗೆ ಬಿಎಸ್‍ವೈ ಬಗ್ಗೆ ಅನುಕಂಪವಿದೆ. ಬಿಎಸ್‍ವೈ ಭ್ರಷ್ಟಾಚಾರದ ಹಣವನ್ನು ಚೆಕ್ ಮೂಲಕ ತೆಗೆದುಕೊಂಡ ಏಕೈಕ ಮುಖ್ಯಮಂತ್ರಿ ಆಗಿದ್ದು, ಅವರ ಬಗ್ಗೆ ಅನುಕಂಪ ಇರುವ ನಾಯಕರು ಸಹ ಅದೇ ಜಾತಿಯವರು ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಹನಿಮೂನ್ ಮುಗಿದು ಹೋಗಿದೆ. ಕಾಂಗ್ರೆಸ್ ಸರ್ಕಾರದ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ ಭ್ರಷ್ಟಾಚಾರದ ಆರೋಪ ಮಾಡಿದರೆ ಸಾಬೀತು ಮಾಡಲಿ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲು ಮಾಡುವವರು ದೆಹಲಿಯಲ್ಲಿದ್ದಾರೆ. ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.