ಬೆಂಗಳೂರು, ಮೇ. 26: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬದಲು ಮಾಡುವ ಜತೆಗೆ ರಾಜ್ಯದಲ್ಲಿ ಸಚಿವರ ಖಾತೆಗಳು ಬದಲಾಗಲಿವೆ. ಕೆಲವರಿಗೆ ಸಚಿವ ಸಂಪುಟ ಭಾಗ್ಯ ಸಿಕ್ಕಿದರೆ, ಇನ್ನೂ ಕೆಲವರು ಸಚಿವ ಸ್ಥಾನ ಕಳೆದುಕೊಳ್ಳುವುದು ಗ್ಯಾರೆಂಟಿ ಎಂಬ ಮಹತ್ವದ ಸಂಗತಿಯೊಂದು ಬಿಜೆಪಿ ಪಾಳಯದಿಂದಲೇ ಹೊರಗೆ ಬಿದ್ದಿದೆ.
ಆಪರೇಷನ್ ಕಮಲ ಮಾಡಿ ಪಕ್ಷಾಂತರಿಗಳಿಗೆ ಮಣೆ ಹಾಕಿ ಯಡಿಯೂರಪ್ಪ ಅವರು ಸಚಿವ ಸಂಪುಟ ರಚನೆ ಮಾಡಿದ್ದರು. ಮಹತ್ವದ ಖಾತೆಗಳನ್ನು ವಲಸೆ ನಾಯಕರಿಗೆ ಕೊಟ್ಟು ಮೂಲ ಬಿಜೆಪಿಗರ ಮುನಿಸಿಗೆ ಕಾರಣವಾಗಿದ್ದರು. ಸರ್ಕಾರ ರಚನೆ ಕಾರಣದಿಂದ ಮೂಲ ಬಿಜೆಪಿಗರೂ ಸುಮ್ಮನಾಗಿದ್ದರು. ಸಿಎಂ ಹುದ್ದೆ ಬದಲಾಗುತ್ತಿದ್ದಂತೆ ಮೂಲ ಬಿಜೆಪಿ ನಾಯಕರಿಗೆ ಆದ್ಯತೆ ನೀಡಿ ಸಚಿವ ಸಂಪುಟ ಪುನಾರಚನೆಯಾಗಲಿದೆ. ಹೀಗಾಗಿ ಅನೇಕರು ಇದೀಗ ತಮ್ಮ ಖಾತೆ ಉಳಿಸಿಕೊಳ್ಳಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಉಪ ಮುಖ್ಯಮಂತ್ರಿ ಸ್ಥಾನದಲ್ಲಿ ಗೋವಿಂದ ಕಾರಜೋಳ ಮುಂದುವರೆಯಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸುವ ಲಕ್ಷಣ ಗೋಚರಿಸುತ್ತಿದೆ. ಅಶ್ವತ್ಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರು ಡಿಸಿಎಂ ಹುದ್ದೆಯಿಂದ ಕೆಳಗೆ ಇಳಿಯಲಿದ್ದಾರೆ. ಕೇವಲ ಇಬ್ಬರು ಡಿಸಿಎಂಗಳನ್ನಷ್ಟೇ ಮುಂದುವರೆಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಯಡಿಯೂರಪ್ಪ ಅವರ ಮೇಲೆ ಪ್ರಭಾವ ಬೀರಿ ಎರಡು ಖಾತೆ ಹೊಂದಿರುವ ಸಚಿವರು ಒಂದೊಂದು ಖಾತೆ ಕಳೆದುಕೊಳ್ಳಲಿದ್ದು, ಆರೋಗ್ಯ ಸಚಿವ ಸುಧಾಕರ್ ಅವರು ಕೂಡ ಒಂದು ಖಾತೆ ಕಳೆದುಕೊಳ್ಳಲಿದ್ದಾರೆ ಎಂಬ ಮಾತು ವಿಧಾನಸೌಧ ಪಡಸಾಲೆಯಲ್ಲಿ ಬಹು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.