ಬೆಂಗಳೂರು, ಮೇ 25; ಕೋವಿಡ್ ಮಾದರಿಗಳ ಪರೀಕ್ಷೆ ವಿಳಂಬ ಮಾಡಿದ ಕರ್ನಾಟಕದ 40 ಲ್ಯಾಬ್‌ಗಳಿಗೆ ದಂಡ ಹಾಕಲಾಗಿದೆ. ಒಟ್ಟು 20.20 ಲಕ್ಷ ದಂಡವನ್ನು ವಿಧಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವಥ ನಾರಾಯಣ ಮಾಹಿತಿ ನೀಡಿದ್ದಾರೆ.
31 ಖಾಸಗಿ ಲ್ಯಾಬ್, 9 ಸರ್ಕಾರಿ ಲ್ಯಾಬ್‌ಗಳು ಸೇರಿ 40 ಪ್ರಯೋಗಾಲಯಗಳಿಗೆ ದಂಡ ಹಾಕಲಾಗಿದೆ. ರಾಜ್ಯದಲ್ಲಿ ಕೋವಿಡ್ ಪರೀಕ್ಷೆಯ ನೋಡೆಲ್ ಅಧಿಕಾರಿಯಾದ ಶಾಲಿನಿ ರಜನೀಶ್ ಸಚಿವರಿಗೆ ಈ ಕುರಿತು ವಿವರಗಳನ್ನು ನೀಡಿದ್ದಾರೆ.
ಕೋವಿಡ್ ಟಾಸ್ಕ್ ಪೋರ್ಸ್ ಅಧ್ಯಕ್ಷರೂ ಆಗಿರುವ ಅಶ್ವಥ ನಾರಾಯಣ, “ಎಲ್ಲಾ ಪ್ರಯೋಗಾಲಯಗಳಿಗೆ 24 ಗಂಟೆಯಲ್ಲಿ ಕೋವಿಡ್ ಮಾದರಿ ಪರೀಕ್ಷೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ. ಆದರೆ ಕೆಲವು ಲ್ಯಾಬ್‌ಗಳು ವರದಿ ನೀಡುವುದು ತಡ ಮಾಡುತ್ತಿವೆ” ಎಂದರು.
“ಮೇ 8ರಿಂದ ಇಂತಹ ಲ್ಯಾಬ್‌ಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದುವರೆಗೂ 10,103 ಮಾದರಿಗಳ ವರದಿ ತಡವಾಗಿದೆ. ಇದರಲ್ಲಿ 3,034 ಸರ್ಕಾರಿ ಮತ್ತು ಉಳಿದಿದ್ದು ಖಾಸಗಿ ಲ್ಯಾಬ್‌ಗಳಿಗೆ ಸೇರಿದೆ. ವಿಳಂಬವಾದ ಪ್ರತಿ ಮಾದರಿಗೆ 200 ರೂ. ದಂಡ ವಿಧಿಸಲಾಗಿದೆ” ಎಂದು ಸಚಿವರು ತಿಳಿಸಿದರು.
5 ಲ್ಯಾಬ್‌ಗಳು ಐಸಿಎಂಆರ್ ಪೋರ್ಟಲ್‌ಗೆ ವರದಿ ಅಪ್‌ಲೋಡ್ ಮಾಡದೇ ಅದನ್ನು ರೋಗಿಗಳಿಗೆ ನೀಡಿದೆ. ಇಂತಹ ಲ್ಯಾಬ್‌ಗಳಿಗೆ ದಂಡ ವಿಧಿಸಲಾಗಿದೆ. ಅಲ್‌ಲೋಡ್ ಮಾಡುವುದು ವಿಳಂಬ ಮಾಡಿದ 14 ಲ್ಯಾಬ್‌ಗಳಿಗೆ ಶೋಕಾಸ್ ನೋಟಿಸ್ ಸಹ ನೀಡಲಾಗಿದೆ.
ಕರ್ನಾಟಕದಲ್ಲಿ ಕೋವಿಡ್ ಹರಡುವಿಕೆ ತಡೆಯಲು ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಸೋಮವಾರ 25311 ಹೊಸ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 440435.
Laxmi News 24×7