ನವದೆಹಲಿ, : ಅಲೋಪತಿ ವೈದ್ಯಕೀಯ ಪದ್ದತಿಯ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ ಆರೋಪದ ಹಿನ್ನೆಲೆಯಲ್ಲಿ ಯೋಗಗುರು ಬಾಬಾ ರಾಮ್‌ದೇವ್‌ಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ರಾಮ್‌ದೇವ್ ಮಾತನಾಡಿದ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಇದರಲ್ಲಿ ಅಲೋಪತಿ ಮತ್ತು ವೈಜ್ಞಾನಿಕ ವೈದ್ಯಕೀಯ ಪದ್ದತಿಗೆ ಅವಮಾನಕರ ಮಾತುಗಳನ್ನು ಆಡಿದ್ದಾರೆ ಎಂದು ಲೀಗಲ್ ನೋಟಿಸ್ ಕಳುಹಿಸಲಾಗಿದೆ.
ವೈರಲ್ ಆದ ವಿಡಿಯೋದಲ್ಲಿ ಬಾಬಾ ರಾಮ್‌ದೇವ್ ಅಲೋಪತಿ ಚಿಕಿತ್ಸೆಯನ್ನು ‘ಮೂರ್ಖತನದ ವಿಜ್ಞಾನ’ ಎಂದು ಜರಿದಿದ್ದರು. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದ ರೆಮ್‌ಡಿಸಿವಿರ್, ಫೆವಿಫ್ಲೂ ಮತ್ತು ಇತರ ಔಷಧಿಗಳು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ವಿಫಲವಾಗಿವೆ ಎಂಬ ಮಾತುಗಳು ಈ ವಿಡಿಯೋದಲ್ಲಿದೆ. ಇದಕ್ಕೂ ಮುನ್ನ ರಾಮ್‌ದೇವ್ ಆಧುನಿಕ ವೈದ್ಯಕೀಯ ಸಿಬ್ಬಂದಿಗಳನ್ನು “ಕೊಲೆಗಾರರು” ಎಂಬ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಗಳು ಭಾರತದಲ್ಲಿ ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. ಐಎಂಎ ಜೊತೆಗೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ವೈದ್ಯರ ಸಂಘಗಳು, ಸಫ್ದರ್ಜಂಗ್ ಆಸ್ಪತ್ರೆಯ ಆರ್‌ಡಿಎ ಮತ್ತು ಇತರ ವೈದ್ಯಕೀಯ ಸಂಸ್ಥೆಗಳು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಲ್ಲಿ ರಾಮ್‌ದೇವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿನಂತಿಸಿವೆ. ಕೊರೊನಾ ವೈರಸ್ ವಿರುದ್ಧದ ಚಿಕಿತ್ಸೆಯ ಸಂದರ್ಭದಲ್ಲಿ ರಾಮ್‌ದೇವ್ ಸಾರ್ವಜನಿಕರ ಹಾದಿ ತಪ್ಪಿಸುತ್ತಾರೆ ಎಂದು ರಾಮ್‌ದೇವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವರಲ್ಲಿ ಮನವಿಯನ್ನು ಮಾಡಲಾಗಿದೆ.
ಆದರೆ ಅಲೋಪತಿ ಹಾಗೂ ವೈಜ್ಞಾನಿಕ ವೈದ್ಯಕೀಯ ಪದ್ದತಿ ವಿರುದ್ಧ ರಾಮ್‌ದೇವ್ ಮಾತುಗಳನ್ನಾಡಿದ್ದಾರೆ ಎಂಬ ಆರೋಪಗಳನ್ನು ಪತಂಜಲಿ ಯೋಗಪೀಠ ಟ್ರಸ್ಟ್ ನಿರಾಕರಿಸಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಹಗಲು ರಾತ್ರಿ ಶ್ರಮಿಸುತ್ತಿರುವ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಗಳ ಬಗ್ಗೆ ಅಪಾರವಾದ ಗೌರವ ಹೊಂದಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.
Laxmi News 24×7