ಬೆಂಗಳೂರು : ಕೊರೊನಾ ದಿಂದಾಗಿ ಮನೆಯಲ್ಲೇ ಇರುವ ವಿದ್ಯಾರ್ಥಿಗಳ ಸ್ವಯಂ ಅಧ್ಯಯನಕ್ಕೆ ಅನುಕೂಲವಾಗುವಂತೆ ಆಗಸ್ಟ್ ಅಂತ್ಯದೊಳಗೆ ಪಠ್ಯಪುಸ್ತಕ ಪೂರೈಕೆಗೆ ಶಿಕ್ಷಣ ಇಲಾಖೆ ಮುಂದಾಗಿದೆ.
2021-22ನೇ ಸಾಲಿನ ಪಠ್ಯಪುಸ್ತಕ ಮುದ್ರಣ ಸಂಬಂಧ ಕರ್ನಾಟಕ ಪಠ್ಯಪುಸ್ತಕ ಸಂಘವು ಎಲ್ಲ ಶಾಲೆಗಳಿಂದ ಈಗಾಗಲೇ ಪುಸ್ತಕದ ಮಾಹಿತಿ ಪಡೆದಿದೆ. ಪುಸ್ತಕ ಮುದ್ರಣ ಕ್ಕಾಗಿ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ.
ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, ಕಾರ್ಯಾದೇಶ ನೀಡಿದ 100 ದಿನಗಳೊಳಗೆ ಟೆಂಡರ್ ಪಡೆದ ಸಂಸ್ಥೆ ಪುಸ್ತಕಗಳನ್ನು ಮುದ್ರಿಸಿ, ಕರ್ನಾಟಕ ಪಠ್ಯ ಪುಸ್ತಕ ಸಂಘಕ್ಕೆ ಒದಗಿಸಲಿದೆ. ಸಂಘದಿಂದ ಶಾಲೆಗಳಿಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ತಲುಪಿಸಲಾಗುತ್ತದೆ. ಶಾಲೆಯ ಮುಖ್ಯ ಶಿಕ್ಷಕರು ಅಥವಾ ಮುಖ್ಯಸ್ಥರು ಮಕ್ಕಳ ಹೆತ್ತವರನ್ನು ಕರೆಸಿ, ಪುಸ್ತಕ ವಿತರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಕ್ಕಳಿಗೆ ಅನುಕೂಲ
ಕಳೆದ ವರ್ಷವೂ ವಿದ್ಯಾರ್ಥಿಗಳ ಮನೆಗೆ ಪುಸ್ತಕ ತಲುಪಿಸಲಾಗಿತ್ತು. ಈ ವರ್ಷವೂ ಇದನ್ನೇ ಅನುಸರಿಸಲಾಗುತ್ತದೆ. ಮಕ್ಕಳ ಸ್ವಯಂ ಅಧ್ಯಯನಕ್ಕೆ ಇದರಿಂದ ಅನುಕೂಲವಾಗಲಿದೆ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ. ಶೈಕ್ಷಣಿಕ ವರ್ಷ ಆರಂಭಕ್ಕೆ ಮುನ್ನ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಲುಪಿಸಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದರು.
ಮುಂದಿನ ವರ್ಷದ ಪಠ್ಯ
ಪುಸ್ತಕ ವಿತರಣೆಗೆ ಸಂಬಂಧಿಸಿ ಶಾಲೆಗಳಿಂದ ಪುಸ್ತಕಗಳ ಮಾಹಿತಿ ಪಡೆದಿದ್ದೇವೆ. ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಕಾರ್ಯಾದೇಶ ನೀಡಿದ ಅನಂತರ ನೂರು ದಿನಗಳಲ್ಲಿ ಪುಸ್ತಕ ಪೂರೈಕೆ ಆಗಲಿದೆ.
– ಎಂ.ಪಿ. ಮಾದೇಗೌಡ, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಪಠ್ಯಪುಸ್ತಕ ಸಂಘ