ಕೊರೊನಾ ಸಂಕಷ್ಟಕ್ಕೆ ಅನೇಕರು ನೆರವು ನೀಡುತ್ತಿದ್ದಾರೆ. ಸಿನಿ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಮಂದಿ ಹಣ, ಆಕ್ಸಿಜನ್, ವೆಂಟಿಲೇಟರ್, ಫುಡ್ ಕಿಟ್ ಸೇರಿದಂತೆ ಅಗತ್ಯ ವಸ್ತುಗಳ ನೆರವು ನೀಡುತ್ತಿದ್ದಾರೆ.
ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ಯಾಂಡಲ್ ವುಡ್ ನ ಕೆಲವು ಸ್ಟಾರ್ ಕಲಾವಿದರು ಮಾನವೀಯ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಸಿನಿ ಕಾರ್ಮಿಕರ ಕಷ್ಟಕ್ಕೆ ರಿಯಲ್ ಸ್ಟಾರ್ ಉಪೇಂದ್ರ ನೆರವಾಗಿದ್ದಾರೆ.
ಉಪ್ಪಿ ಫೌಂಡೇಶನ್ ಮೂಲಕ ದೇಣಿಗೆ ಸಂಗ್ರಹಿಸಿ ಕಷ್ಟದಲ್ಲಿರೋರಿಗೆ ಸಹಾಯ ಹಸ್ತಚಾಚುತ್ತಿದ್ದಾರೆ. ಉಪೇಂದ್ರ ಫೌಂಡೇಶನ್ ಗೆ ಸಾಕಷ್ಟು ಮಂದಿ ಸಿನಿ ಕಲಾವಿದರು ದೇಣಿಗೆ ನೀಡಿದ್ದಾರೆ. ಸಾಧು ಕೋಕಿಲಾ, ಶೋಭರಾಜ್, ಹಿರಿಯ ನಟಿ ಸರೋಜಾ ದೇವಿ, ಪವನ್ ಒಡೆಯರ್, ನಟಿ ಮಾನ್ಯಾ ಸೇರಿದಂತೆ ಸಾಕಷ್ಟು ಮಂದಿ ಉಪ್ಪಿ ಜೊತೆ ಕೈ ಜೋಡಿದ್ದಾರೆ.
ಇದೀಗ ರಿಯಲ್ ಸ್ಟಾರ್ ನಟನೆಯ ಕಬ್ಜ ಸಿನಿಮಾತಂಡ ಕೂಡ ಉಪ್ಪಿ ಜೊತೆ ಕೈ ಜೋಡಿಸಿದೆ. ಕಬ್ಜ ಸಿನಿಮಾದ ನಿರ್ದೇಶಕ ಆರ್.ಚಂದ್ರು ಮತ್ತು ತಂಡದಿಂದ 1 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಚಿತ್ರಕಾರ್ಮಿಕರ ನೆರವಿಗೆ ನಿಂತಿದ್ದಾರೆ. ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
‘ಖ್ಯಾತ ಸ್ಟಾರ್ ನಿರ್ದೇಶಕ ಆರ್. ಚಂದ್ರು ಮತ್ತು ಕಬ್ಜ ಟೀಂ ವತಿಯಿಂದ 1 ಲಕ್ಷ ರೂ ಹಣ ಮತ್ತು ದಿನಸಿ, ತರಕಾರಿ ಕಿಟ್ ಅನ್ನು ಸಂಕಷ್ಟದಲ್ಲಿರುವ ಚಿತ್ರರಂಗದ TV ಮತ್ತು ಪತ್ರಿಕೋದ್ಯಮದವರಿಗೆ ಕೊಡಲು ಮುಂದೆ ಬಂದಿದ್ದಾರೆ. ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ರೈತರ ಕಷ್ಟಕ್ಕೂ ನೆರವಾಗಿರುವ ರಿಯಲ್ ಸ್ಟಾರ್ ಲಾಕ್ ಡೌನ್ ನಿಂದ ಬೆಳೆದ ಬೆಳೆ ಮಾರಲು ಆಗದೆ ಕಷ್ಟದಲ್ಲಿರುವ ರೈತರಿಂದ ಬೆಳೆ ಖರೀದಿಸುವುದಾಗಿ ಉಪೇಂದ್ರ ಹೇಳಿದ್ದಾರೆ. ಈಗಾಗಲೇ ರೈತರಿಂದ ತರಕಾರಿಗಳನ್ನು ಖರೀದಿಸಿ ದಿನಸಿ ಕಿಟ್ ಜೊತೆ ನೀಡುತ್ತಿದ್ದಾರೆ. ಉಪೇಂದ್ರ ಕೆಲಸಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.