ನವದೆಹಲಿ, ಮೇ 20: ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸಿದೆ. ಪ್ರತಿ ದಿನ ಮೂರು ಲಕ್ಷದಷ್ಟು ಜನ ಸೋಂಕು ಪೀಡಿತರು ಪತ್ತೆಯಾಗುತ್ತಿದ್ದಾರೆ. ಪ್ರತಿ ದಿನ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಕೊರೋನಾದಿಂದ ಸಾಯುತ್ತಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ರಾಜ್ಯಗಳಿಗೆ ಅಗತ್ಯ ಇರುವಷ್ಟು ಕೊರೋನಾ ಲಸಿಕೆ ಪೂರೈಕೆ ಮಾಡುತ್ತಿಲ್ಲ. ಇದರಿಂದ ಮೂರನೇ ಹಂತದ ಕೊರೋನಾ ಲಸಿಕೆ ಹಾಕುವ ಕಾರ್ಯಕ್ರಮ ವಿಫಲವಾಗಿದೆ. ಇನ್ನೊಂದೆಡೆ ಆಮ್ಲಜನಕದ ಸಮಸ್ಯೆ ಆಕಾಶದೆತ್ತರಕ್ಕೆ ಬೆಳೆದು ನಿಂತಿದೆ. ಈ ಎಲ್ಲಾ ಸಮಸ್ಯೆಗಳ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮತ್ತೆ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಮೇ 18ರಂದು ಅತ್ಯಂತ ಹೆಚ್ಚು ಕೊರೋನಾ ಪ್ರಕರಣಗಳಿರುವ ಕರ್ನಾಟಕ, ಬಿಹಾರ, ತಮಿಳುನಾಡು, ಅಸ್ಸಾಂ, ಚಂಡೀಗಢ, ಉತ್ತರಖಂಡ, ಮಧ್ಯಪ್ರದೇಶ, ಗೋವಾ, ಹಿಮಾಚಲ ಪ್ರದೇಶ, ದೆಹಲಿ ರಾಜ್ಯಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಇಂದು ಉಳಿದ 10 ರಾಜ್ಯಗಳ ಜಿಲ್ಲಾಧಿಕಾರಿಗಳ ಜೊತೆ ಇಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದೆ. ಸಭೆಯಲ್ಲಿ ಜಿಲ್ಲೆಗಳಲ್ಲಿ ಕೊರೋನದ ಪರಿಸ್ಥಿತಿಯ ಪರಿಶೀಲನೆ ಮಾಡಲಾಗುತ್ತದೆ. ಅಲ್ಲದೆ ಮೇ 1ರಿಂದ ಆರಂಭವಾಗಿರುವ ಮೂರನೇ ಹಂತದ ಕೊರೋನಾ ಲಸಿಕೆ ನೀಡುವ ಕಾರ್ಯಕ್ರಮ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಮತ್ತು ಇನ್ನಷ್ಟು ಹೆಚ್ಚಿಸುವ ಕುರಿತು ಚರ್ಚೆ ನಡೆಯಲಿದೆ. ಜಿಲ್ಲಾಧಿಕಾರಿಗಳಿಂದ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಕೊರೋನಾ ಅಂಕಿ ಅಂಶಗಳು ಸರಿಯಾಗಿ ಇಲ್ಲ ಎನ್ನುವ ಹಿನ್ನೆಲೆಯಲ್ಲಿ ಪ್ರಕರಣಗಳ ವಿಷಯದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಕೊರೊನಾ ನಿಯಂತ್ರಣ ಮಾಡುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ನಿಯಂತ್ರಿಸುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ. ಇದಲ್ಲದೆ ಕೊರೋನಾ ಲಸಿಕೆಗಳ ಕೊರತೆಯ ನಡುವೆಯೂ ವ್ಯಾಕ್ಸಿನೇಷನ್ ಹೆಚ್ಚಿಸುವ ಬಗ್ಗೆ ಚರ್ಚಿಸಲಾಗುತ್ತದೆ. ಔಷಧೀಯ ಉತ್ಪನ್ನಗಳ ಸಮರ್ಪಕ ಪೂರೈಕೆ ಮತ್ತು ಬಳಕೆ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಮೇ 18ರ ಸಭೆಯ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಕ್ಸಿನೇಷನ್ ಹೆಚ್ಚಿಸುವ ಬಗ್ಗೆ ಮಾತನಾಡಿದ್ದರು. ಲಾಕ್ಡೌನ್ ಮಾಡುವ ಬಗ್ಗೆ ಡಿಸಿಗಳೇ ಕ್ರಮ ಕೈಗೊಳ್ಳುವಂತೆ ಹೇಳಿದ್ದರು. ಅದೇ ರೀತಿ ಇವತ್ತು ಕೂಡ ಕೆಲವು ಸೂಚನೆ ನೀಡುವ ಸಾಧ್ಯತೆ ಇದೆ. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವ ಡಾ. ಹರ್ಷವರ್ಧನ್, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ನೀತಿ ಆಯೋಗದ (ಆರೋಗ್ಯ)ಸದಸ್ಯರು, ಆರೋಗ್ಯ ಕಾರ್ಯದರ್ಶಿ, ಔಷಧ ಕಾರ್ಯದರ್ಶಿ, ಮತ್ತು ಪ್ರಧಾನ ಮಂತ್ರಿಗಳ ಕಾರ್ಯಾಲಯದ, ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳ ಇತರ ಅಧಿಕಾರಿಗಳು ಭಾಗವಹಿಸಲಿದ್ದಾರೆ.
Laxmi News 24×7