Breaking News

ಹೊಸ ಗಂಡ ತಂದೇ ಬಿಟ್ಟ ಗಂಡಾಂತರ: 23 ವರ್ಷ ಯುವಕನ ಮೇಲಿನ ಮೋಹಕ್ಕೆ 6 ವರ್ಷದ ಮಗನೇ ಬಲಿಯಾದ!

Spread the love

ನೆಲಮಂಗಲ: ಕೇವಲ ಮೋಹ, ಕಾಮದ ಹಿಂದೆ ಹೋದರೆ ಸಂಬಂಧಗಳೆಲ್ಲಾ ಹೇಗೆ ಮಣ್ಣಾಗುತ್ತವೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಆತನದ್ದು ತಂದೆಯಾಗುವ ವಯಸ್ಸೇ ಅಲ್ಲ ಅಂತದ್ದರಲ್ಲಿ 6 ವರ್ಷ ಬಾಲಕನಿಗೆ ಮಲತಂದೆಯಾಗಿದ್ದ. ಬಾಲಕನ ತಾಯಿಯ ಮೇಲಿನ ಮೋಹ 23 ವರ್ಷಕ್ಕೆ ಮಲತಂದೆಯನ್ನಾಗಿ ಮಾಡಿತ್ತು. ಕೇವಲ ತಾಯಿಯೊಂದಿಗಿನ ಸಂಬಂಧ ಬಯಸ್ಸಿದ್ದ 23 ವರ್ಷ ಯುವಕನಿಗೆ ತಂದೆಯಾಗುವುದು ಬೇಕಾಗಿಯೇ ಇರಲಿಲ್ಲ. 6 ವರ್ಷ ಹುಡುಗನ ಆಟ-ತುಂಟಾಟಗಳಿಗೆ ಮಲತಂದೆ ಎನಿಸಿಕೊಂಡವನು ಅಡಿಗಡಿಗೂ ಸಿಡಿಸಿಡಿ ಎನ್ನುತ್ತಿದ್ದ. ಕೊನೆಗೆ ಕ್ಷುಲ್ಲಕ ಕಾರಣಕ್ಕೆ ಬಾಲಕನನ್ನು ಕೊಂದೇ ಬಿಟ್ಟಿದ್ದಾನೆ ಆ ಪಾಪಿ.

ನೆಲಮಂಗಲದ ಭಿನ್ನಮಂಗಲ ಗ್ರಾಮದಲ್ಲಿ 6 ವರ್ಷದ ಹರ್ಷವರ್ಧನ್​ ಎಂಬ ಬಾಲಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ . ಮನೆಯಲ್ಲಿ ತಾಯಿ ಇಲ್ಲದ ವೇಳೆ ಮಲತಂದೆಯೇ ಹರ್ಷವರ್ಧನ್​​ ಪ್ರಾಣ ತೆಗೆದಿದ್ದಾನೆ. ಬಾಲಕನ ತಾಯಿ ನೇತ್ರಾ ಎಂಬುವರು ಒಂದೂವರೆ ವರ್ಷದ ಹಿಂದೆ ಪತಿಯನ್ನು ತೊರೆದಿದ್ದರು. 2 ತಿಂಗಳುಗಳ ಹಿಂದೆಯಷ್ಟೇ ವಯಸ್ಸಿನಲ್ಲಿ ತನಗಿಂತ ಚಿಕ್ಕವನಾದ 23 ವರ್ಷದ ಕಾರ್ತಿಕ್ ಎಂಬಾತ​ನನ್ನು ಮದುವೆಯಾಗಿದ್ದರು. ಎರಡೇ ತಿಂಗಳಲ್ಲಿ ಹೊಸ ಗಂಡ ಆಕೆ ಮಗನ ಪ್ರಾಣವನ್ನೇ ತೆಗೆದುಬಿಟ್ಟಿದ್ದಾನೆ. ಘಟನೆ ನಡೆದ ದಿನ ಮಲತಂದೆ ಕಾರ್ತಿಕ್​, ಬಾಲಕ ಹರ್ಷವರ್ಧನ್​ ಮಾತ್ರ ಮನೆಯಲ್ಲಿದ್ದರು. ತಾಯಿ ಕೆಲಸಕ್ಕೆ ಹೋಗಿದ್ದಳು. ಆಕೆಯೇ ಹೇಳುವ ಪ್ರಕಾರ ಮಧ್ಯಾಹ್ನದ ವೇಳೆ ಕರೆ ಮಾಡಿದ ಕಾರ್ತಿಕ್​​ ನಿನ್ನ ಮಗ ನಾಲಗೆ ಕಡಿದುಕೊಳ್ಳುತ್ತಿದ್ದಾನೆ ಎಂದು ಹೇಳಿದ್ದಾನಂತೆ. ಪಿಟ್ಸ್​ ಇರಬಹುದು ಎಂದು ಶಂಕಿಸಿದ ನಾನು ಮಗನನ್ನು ಕರೆದುಕೊಂಡು ಆಸ್ಪತ್ರೆಗೆ ಬಾ ಎಂದು ಹೇಳಿದೆ. ನನ್ನ ಪತಿ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಮಗ ಹರ್ಷವರ್ಧನ್​​ ಮೃತಪಟ್ಟಿದ್ದ ಎಂದು ನೇತ್ರಾ ಹೇಳಿದ್ದಾರೆ.

ಬಾಲಕನ ಸಾವಿನ ಬಗ್ಗೆ ಅನುಮಾನಗೊಂಡು ತನಿಖೆ ನಡೆಸಿದ ನೆಲಮಂಗಲ ಟೌನ್​​ ಠಾಣೆ ಪೊಲೀಸರಿಗೆ ಅಸಲಿ ಕಥೆ ಗೊತ್ತಾಗಿದೆ. ತಾಯಿ ಇಲ್ಲದ ವೇಳೆ ಬಾಲಕ ಗಲಾಟೆ ಮಾಡಿದ ಎಂಬ ಒಂದೇ ಕಾರಣಕ್ಕೆ ಮಲತಂದೆ ಕಾರ್ತಿಕ್​​ ಆತನನ್ನು ಹೊಡೆದು ಸಾಯಿಸಿದ್ದಾನೆ. ಕ್ಷುಲ್ಲಕ ಕಾರಣಕ್ಕೆ 6 ವರ್ಷ ಬಾಲಕನನ್ನು ಕೊಲೆ ಮಾಡಿದ್ದಾನೆ. ನಂತರ ನಾಲಗೆ ಕಚ್ಚಿಕೊಳ್ಳುತ್ತಿದ್ದಾನೆ ಎಂದು ನಾಟಕವಾಡಿದ್ದಾನೆ. ಪೊಲೀಸರು ಕೆಲವೇ ಗಂಟೆಗಳಲ್ಲಿ ಮಲತಂದೆಯ ಮರ್ಮವನ್ನು ಬಯಲಿಗೆಳೆದಿದ್ದಾರೆ. ಹರೆಯದ ಯುವಕನ ಸಹವಾಸದಿಂದ ತಾಯಿ ಎನಿಸಿಕೊಂಡವಳು ಹೆತ್ತ ಮಗನನ್ನೇ ಕಳೆದುಕೊಂಡಿದ್ದಾಳೆ. ಇತ್ತ ಹೊಸ ಗಂಡನೂ ಇಲ್ಲ, ಅತ್ತ ಮಗನೂ ಇಲ್ಲದೆ ನಡುರಸ್ತೆಯಲ್ಲಿ ನಿಂತಿದ್ದಾಳೆ. ಸದ್ಯ ಆರೋಪಿ ಕಾರ್ತಿಕ್​​ನನ್ನು ನೆಲಮಂಗಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನೇತ್ರಾ ಅವರ ಮೇಲಿನ ಮೋಹಕ್ಕಾಗಿ ಸಂಸಾರ ಹೂಡಿದ್ದವನಿಗೆ ತಂದೆಯಾಗುವ ಸಣ್ಣ ಅರ್ಹತೆಯೂ ಇರಲಿಲ್ಲ. ಅದಕ್ಕೆ ಪುಟ್ಟ ಬಾಲಕನ ತುಂಟಾಟವನ್ನು ಸಹಿಸದೇ ಆತನ ಪಾಲಿಗೆ ಯಮನಾಗಿದ್ದಾನೆ. ಇದಕ್ಕೆ ಅಲ್ಲವೇ ಹೇಳುವುದು ಮಾಡಬಾರದನ್ನು ಮಾಡಿದರೆ ಆಗಬಾರದ್ದು ಆಗುತ್ತೆ ಅಂತ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ