ಬೆಂಗಳೂರು: ಎಲ್ಲರ ಸಕ್ರಿಯ ಸಹಕಾರವಿಲ್ಲದೆ ಕಠಿಣ ನಿಯಮಗಳು ಯಶಸ್ವಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಏನೇ ಅಡೆತಡೆ, ಸಮಸ್ಯೆಗಳಿದ್ದರೆ, ದಯವಿಟ್ಟು ಅದನ್ನು ಜಿಲ್ಲಾಧಿಕಾರಿಗಳ, ಜಿಲ್ಲಾ ಉಸ್ತುವಾರಿ ಸಚಿವರ ಅಥವಾ ನೇರವಾಗಿ ನನ್ನ ಗಮನಕ್ಕೆ ತನ್ನಿ. ಒಟ್ಟಾಗಿ ನಾವು ಕೊರೋನಾವನ್ನು ಸೋಲಿಸೋಣ. ಸಾರ್ವಜನಿಕರು ಕೂಡ ಸೋಂಕು ನಿಯಂತ್ರಿಸಲು ಸಹಕರಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು,ಕೋವಿಡ್ ಸೋಂಕಿನ ಸರಪಳಿಯನ್ನು ಮುರಿಯಲು ಇಂದಿನಿಂದ ಮತ್ತಷ್ಟು ಕಠಿಣ ಕ್ರಮಗಳನ್ನು ವಿಧಿಸಲಾಗಿದೆ. ಎಲ್ಲಾ ಸಂಸದರು ಮತ್ತು ಶಾಸಕರು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಉಳಿದು, ಉದ್ದೇಶ ಈಡೇರುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ನಿಯಮಗಳು ಜಾರಿಯಾಗುವುದನ್ನು ಖಚಿತಪಡಿಸಬೇಕು ಎಂದಿದ್ದಾರೆ.
ರಾಜ್ಯದಲ್ಲಿ ಇಂದಿನಿಂದ ಕಠಿಣ ನಿಯಮಗಳು ಜಾರಿಯಾಗಿದೆ. ಇಂದಿನಿಂದ ಮೇ 24ರವರೆಗೆ ಈ ನಿಯಮಗಳು ಜಾರಿಯಲ್ಲಿಲಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅವಕಾಶವಿದೆ. ಆದರೆ ವಾಹನಗಳನ್ನು ರಸ್ತೆಗಿಳಿಸಲು ಅವಕಾಶವಿಲ್ಲ.