ವಿಜಯಪುರ: ಕರೊನಾ ಎರಡನೆಯ ಅಲೆ ತನ್ನ ರೌದ್ರಾವತಾರ ತೋರುತ್ತಿರುವ ನಡುವೆಯೇ, ಇಂದಿನ ಕೆಲವು ಆಸ್ಪತ್ರೆಗಳ ಸ್ಥಿತಿ ನೋಡಿದರೆ, ಸೋಂಕಿತರು ಅದರ ಒಳ ಹೋದವರು ಹೊರಕ್ಕೆ ಬರುತ್ತಾರೆ ಎಂಬ ಯಾವ ಆಸೆಯನ್ನೂ ಇಟ್ಟುಕೊಳ್ಳದ ಪರಿಸ್ಥಿತಿ ಇದೆ. ಇವುಗಳ ನಡುವೆಯೇ ಕೆಲವರು ಆಸ್ಪತ್ರೆಗಳು ಹಣ ಮಾಡುವ ದಂಧೆಗೆ ಇಳಿದಿವೆ. ದಿನನಿತ್ಯ ಹೆಣದ ರಾಶಿ ನೋಡುತ್ತಿದ್ದರೂ, ಮನುಷ್ಯನ ಜೀವನದ ಅಸಾಯಕತೆ ಕಣ್ಣಮುಂದೆ ಇದ್ದರೂ, ಕೆಲ ವೈದ್ಯರು ಹಣಕ್ಕಾಗಿ ಬಾಯಿ ಬಿಡುವುದು ಮಾತ್ರ ನಿಲ್ಲದ ಸ್ಥಿತಿ ಉಂಟಾಗಿದೆ.
ಅಂಥದ್ದೇ ಒಂದು ಕರಾಳ ಮುಖ ವಿಜಯಪುರದ ಬಂಜಾರಾ ಆಸ್ಪತ್ರೆಯಲ್ಲಿ ನಡೆದಿದೆ. ಈ ಚಿತ್ರದಲ್ಲಿರುವ ಸುರೇಶ ನಾಯಕ (57) ಶಿಲ್ಪಾ ನಾಯಕ (47) ಎಂಬ ಸೋಂಕಿತರು ಈ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಬ್ಬರೂ ಮೃತಪಟ್ಟಿದ್ದಾರೆ. ಇದಾಗಲೇ 11.50 ಲಕ್ಷ ರೂಪಾಯಿ ಬಿಲ್ ಮಾಡಿರುವ ಆಸ್ಪತ್ರೆಯ ಸಿಬ್ಬಂದಿ ಶವವನ್ನು ಕುಟುಂಬಸ್ಥರಿಗೆ ನೀಡಲು ಎರಡೂವರೆ ಲಕ್ಷದ ಬೇಡಿಕೆ ಇಟ್ಟಿರುವ ಭಯಾನಕ ಘಟನೆ ಇಲ್ಲಿ ನಡೆದಿದ್ದು, ಈ ಕುರಿತು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
11.50 ಲಕ್ಷ ರೂಪಾಯಿಗಳಲ್ಲಿ ಇದಾಗಲೇ ಕುಟುಂಬಸ್ಥರು 9 ಲಕ್ಷ ರೂಪಾಯಿ ನೀಡಿದ್ದಾರೆ. ಆದರೆ ಉಳಿದ ಎರಡೂವರೆ ಲಕ್ಷ ರೂಪಾಯಿ ನೀಡುವಂತೆ ಆಸ್ಪತ್ರೆ ಸಿಬ್ಬಂದಿ ಕೇಳುತ್ತಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಮೂವರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ ಈ ದಂಪತಿ. ಉಳಿದ ಹಣ ನೀಡಲು ಆಗದೇ ಶವಕ್ಕಾಗಿ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಕಣ್ಣೀರು ಸುರಿಸುತ್ತಿರುವ ದೃಶ್ಯ ಕಂಡುಬಂತು.