ಭಾರತದ ನಿರುದ್ಯೋಗ ದರವು ಏಪ್ರಿಲ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಶೇಕಡಾ 8ಕ್ಕೆ ಏರಿಕೆಗೊಂಡಿದೆ. ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಅನೇಕ ರಾಜ್ಯಗಳು ನಿರ್ಬಂದಕ್ಕೊಳಗಾಗಿದ್ದು, ವೈರಸ್ ಪ್ರಕರಣಗಳಲ್ಲಿ ದಾಖಲೆಯ ಏರಿಕೆ ಕಂಡಿದೆ.
ಖಾಸಗಿ ಸಂಶೋಧನಾ ಸಂಸ್ಥೆಯಾದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈ.ಲಿ.ನ ಅಂಕಿ ಅಂಶಗಳ ಪ್ರಕಾರ, ಮಾರ್ಚ್‌ನಲ್ಲಿ ಶೇಕಡಾ 6.5 ರಷ್ಟಿದ್ದ ನಿರುದ್ಯೋಗ ದರವು ಏಪ್ರಿಲ್‌ನಲ್ಲಿ ಶೇಕಡಾ 7.97ಕ್ಕೆ ಏರಿಕೆಗೊಂಡಿದೆ.
ಭಾರತದಲ್ಲಿ ಭಾನುವಾರ 3,689ರಷ್ಟು ಸೋಂಕಿತರು ಕೋವಿಡ್-19ಗೆ ಬಲಿಯಾಗಿದ್ದು ದಾಖಲೆಯಾಗಿದೆ. ಭಾರತವು ಪ್ರತಿದಿನ 4,00,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ ಮೊದಲ ದೇಶವಾದ ನಂತರ ಸೋಮವಾರ ಹೊಸ ಪ್ರಕರಣಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಇಳಿಕೆಗೊಂಡಿದೆ.
ಅನೇಕ ರಾಜ್ಯಗಳಲ್ಲಿ ನಿರ್ಬಂಧಗಳಿಂದಾಗಿ ಬೇಡಿಕೆ ಮತ್ತು ಉತ್ಪಾದನೆ ಸಾಕಷ್ಟು ಕುಸಿದಿದ್ದು, ಈ ವರ್ಷ ಉದ್ಯೋಗದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಜೊತೆಗೆ ಆರ್ಥಿಕ ತಜ್ಞರ ಪ್ರಕಾರ ಸಾಂಕ್ರಾಮಿಕವು ಭಾರತದ ಎರಡು ಅಂಕಿಯ ಆರ್ಥಿಕ ಬೆಳವಣಿಗೆಯನ್ನು ತಲುಪುವ ಸಾಧ್ಯತೆಗಳಿಗೆ ತಡೆಯೊಡ್ಡಲಿದೆ.