ಹುಬ್ಬಳ್ಳಿ(ಮೇ 02): ರಾಜ್ಯದಲ್ಲಿ ದಿನೇ ದಿನೇ ಕೊರೋನಾ ತೀವ್ರಗೊಂಡಿದ್ದು, ಕೊರೋನಾ ಎರಡನೇ ಅಲೆಗೆ ಜನ ತತ್ತರಿಸುವಂತಾಗಿದೆ. ರಾಜ್ಯದ ಹಲವೆಡೆ ಬೆಡ್ ಗಳಿಗಾಗಿ ಪರದಾಟ ಮುಂದುವರಿದಿದೆ. ಬೆಡ್, ವೆಂಟಿಲೇಟರ್ ಸಿಗದೆ ರೋಗಿಗಳು ಪರದಾಡುವಂತಾಗಿದೆ. ಆಸ್ಪತ್ರೆ ಎದುರಿನಲ್ಲಿಯೇ ಆಯಂಬುಲೆನ್ಸ್ ಇತ್ಯಾದಿಗಳಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರ ಸಂಕಷ್ಟಕ್ಕೆ ಸ್ಪಂದಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಹುಬ್ಬಳ್ಳಿ ಕೇಂದ್ರ ಸ್ಥಾನ ಹೊಂದಿರೊ ನೈರುತ್ಯ ರೈಲ್ವೆ ವಿಭಾಗದಿಂದ ರೈಲ್ವೆ ಐಸೋಲೇಷನ್ ಬೋಗಿಗಳನ್ನು ಸ್ಥಾಪನೆ ಮಾಡಲಾಗಿದೆ. ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ 250 ಐಸೋಲೇಷನ್ ಕೋಚ್ ಅಸ್ತಿತ್ವಕ್ಕೆ ತರಲಾಗಿದೆ. ಕಳೆದ ವರ್ಷ ಕೊರೋನಾ ಮೊದಲ ಅಲೆ ವ್ಯಾಪಕಗೊಳ್ತಿದ್ದ ಸಂದರ್ಭದಲ್ಲಿ, ನೈರುತ್ಯ ರೈಲ್ವೆ ವಲಯ 320 ಐಸೋಲೇಷನ್ ಕೋಚ್ ನಿರ್ಮಿಸಿತ್ತು. ಹುಬ್ಬಳ್ಳಿಯಲ್ಲಿ ರೂಪಿಸಿದ ಐಸೋಲೇಶನ್ ಕೋಚ್ ಗಳನ್ನು, ದೇಶದ ವಿವಿಧೆಡೆಗೆ ಕೋವಿಡ್ ಸೋಂಕಿತರ ಚಿಕಿತ್ಸೆಗೆಂದು ಕಳಿಸಿಕೊಡಲಾಗಿತ್ತು.
ಇದೀಗ ಕೊರೋನಾ 2 ನೇ ಅಲೆ ಅಬ್ಬರಿಸಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕೋವಿಡ್ ಸೋಂಕಿತರಿಗಾಗಿ ಐಸೋಲೇಷನ್ ಬೋಗಿಗಳ ಸ್ಥಾಪನೆ ಮಾಡಲಾಗಿದೆ. ಹುಬ್ಬಳ್ಳಿಯೊಂದರಲ್ಲಿಯೇ 90 ಐಸೋಲೇಷನ್ ಕೋಚ್ ವ್ಯವಸ್ಥೆ ಮಾಡಲಾಗಿದೆ.
Daniel Smith: ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಡೇನಿಯಲ್ ಸ್ಮಿತ್ ನೇಮಕ
ಒಂದೊಂದು ಐಸೋಲೇಷನ್ ಬೋಗಿಯಲ್ಲಿ 8 ರಿಂದ 16 ಸೋಂಕಿತರಿಗೆ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯದಲ್ಲಿದ್ದ ಸೀಟ್ ನ್ನು ತೆಗೆಯಲಾಗಿದ್ದು, ಎರಡೂ ಬದಿಗಳಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಬೋಗಿಯಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ತಂಗಲು, ಪಿಪಿಇ ಕಿಟ್ ಬದಲಾಯಿಸಲು ವ್ಯವಸ್ಥೆ ಮಾಡಲಾಗಿದೆ.
ಪ್ರತಿ ಬೋಗಿಯಲ್ಲಿಯೂ ಮೂರು ಬಯೋ ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಒಂದು ಸ್ನಾನ ಗೃಹದ ವ್ಯವಸ್ಥೆ ಕೈಗೊಳ್ಳಲಾಗಿದೆ. ಇಡೀ ಬೊಗಿಯ ಸತ್ತ ಕಿಟಕಿಗಳಿಗೆ ಸೊಳ್ಳೆ ಪರದೆ ಅಳವಡಿಕೆ ಮಾಡಲಾಗಿದೆ. ಪ್ರತಿ ಬೆಡ್ ಬಳಿಯೂ ಆಕ್ಸಿಜನ್ ಅಳವಡಿಕೆಗೆ ವ್ಯವಸ್ಥೆ ಮಾಡಲಾಗಿದೆ. ಮೂರು ಮಾದರಿಯ ಕಸದ ಬಕೆಟ್ ಗಳನ್ನು ಸಹ ಇಡಲಾಗಿದೆ. ಕೋವಿಡ್ ಸೋಂಕಿತರಿಗೆ ಇರುವಲ್ಲಿಯೇ ಅವಶ್ಯಕ ಸೌಲಭ್ಯ ಕಲ್ಪಿಸಲಾಗಿದೆ.ಸದ್ಯ ನಾವು ಐಸೋಲೇಶನ್ ಬೋಗಿಗಳನ್ನು ಸಿದ್ಧ ಮಾಡಿ ಇಟ್ಟುಕೊಂಡಿದ್ದೇವೆ. ಎಲ್ಲಿ ಅಗತ್ಯ ಬೀಳುತ್ತೊ ಅಲ್ಲಿಗೆ ಕಳಿಸಿಕೊಡ್ತೇವೆ. ಜಿಲ್ಲಾಡಳಿತದ ಸೂಚನೆಯ ಅನ್ವಯ ಐಸೋಲೇಷನ್ ಬೋಗಿ ಕಳಿಸಿಕೊಡ್ತೇವೆ. ನಾನ್ ಸಿಮ್ಟಮಿಕ್ ಕೋವಿಡ್ ರೋಗಿಗಳಿಗೆ ಐಸೋಲೇಶನ್ ಬೋಗಿಯಲ್ಲಿ ಚಿಕಿತ್ಸೆ ಕೊಡಲಾಗುತ್ತದೆ. ಕೋವಿಡ್ ಆಸ್ಪತ್ರೆಗೆ ಸಮೀಪದಲಿಯೇ ಐಸೊಲೇಷನ್ ಕೋಚ್ ನಿಲ್ಲಿಸಲಾಗುತ್ತೆ. ರೋಗಿಯ ಚಿಕಿತ್ಸೆಯಲ್ಲಿ ಏರುಪೇರುಗಳು ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ.
ಕೋವಿಡ್ ಸೋಂಕಿತರಿಗೆ ತಲೆದೋರಿರೋ ಬೆಡ್ ಗಳ ಕೊರತೆ ನೀಗಿಸಲು ರೈಲ್ವೆ ಇಲಾಖೆಯಿಂದಲ್ಲೂ ಪ್ರಯತ್ನ ನಡೆದಿದೆ. ದೇಶದ ವಿವಿಧೆ ಡೆಗೆ ಅಗತ್ಯವಿರೋ ಕಡೆ ಐಸೋಲೇಶನ್ ಕೋಚ್ ಗಳನ್ನು ಕಳಿಸಿಕೊಡಲು ಸಕಲ ಸಿದ್ಧತೆ ಮಾಡಿಕೊಂಡಿರೋದಾಗಿ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ಮಾಹಿತಿ ನೀಡಿದ್ದಾರೆ.