ಚಿಕ್ಕಮಗಳೂರು: ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಿಗೆ ಕಠಿಣ ನಿಯಮವನ್ನು ಹೇರಲಾಗಿದೆ. ಸಾವಿರಾರು ಜನರನ್ನ ಸೇರಿಸಿ ಮದುವೆ ಮಾಡಬೇಕು ಎಂದು ಆಸೆಪಟ್ಟವರು ಇದೀಗ 50 ಮಂದಿಯನ್ನ ಸೇರಿಸಿ ಮದುವೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅನಿವಾರ್ಯವಾಗಿ ದೊಡ್ದ ದೊಡ್ಡ ಹಾಲ್ಗಳಲ್ಲಿ ಬುಕ್ ಮಾಡಿದ ಮದುವೆಗಳೇಲ್ಲ ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಮಾಡಲು ನಿರ್ಧರಿಸಲಾಗಿದೆ. ಆದರೆ ಕನ್ಷೆಷನ್ ಹಾಲ್ಗಳಿಗೆ ಮುಂಗಡವಾಗಿ ಕಟ್ಟಿದ ಹಣವನ್ನ ಮಾತ್ರ ಕೇಳಬೇಡಿ ಎಂದು ಮಾಲೀಕರು ಹೇಳುತ್ತಿದ್ದಾರೆ. ಹೀಗಾಗಿ ಕುಟುಂಬಸ್ಥರಲ್ಲಿ ತೀವ್ರ ಆತಂಕ ಎದುರಾಗಿದೆ.
ಮದುವೆ ಮಾಡೊದು ಎಂದರೆ ಅಷ್ಟು ಸುಲಭದ ಮಾತಲ್ಲ. ಸದ್ಯ ಕೊವಿಡ್ ಪರಿಸ್ಥಿತಿಯಲ್ಲಿ ಮದುವೆ ಆಗೋದು, ಮದುವೆ ಮಾಡೋದಂತೂ ದೊಡ್ಡ ಸವಾಲೇ ಸರಿ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ನೂರಾರು ಮದುವೆಗಳು ನಡೆಯಬೇಕಿದ್ದು, ಐದಾರು ತಿಂಗಳ ಹಿಂದೆನೇ ಮದುವೆ ಹಾಲ್ಗಳಿಗೆ ಹಣ ಕೊಟ್ಟು ಬುಕ್ ಮಾಡಿದ ಮಂದಿ ಇದೀಗ ಪೇಚಿಗೆ ಒಳಗಾಗಿದ್ದಾರೆ. ಸರ್ಕಾರದ ನಿಯಮದಂತೆ ನಾವು ಮನೆಗಳಲ್ಲೋ ಇಲ್ಲಾ ದೇವಸ್ಥಾನಗಳಲ್ಲೋ ಮದುವೆ ಕಾರ್ಯಕ್ರಮ ಮಾಡುತ್ತೀವಿ. ಆದರೆ ನಾವು ಹಾಲ್ಗಳಿಗೆ ಕಟ್ಟಿರುವ ಮುಂಗಡ ಹಣವನ್ನ ಕೊಡಿ ಎಂದು ವಧು-ವರರ ಪೋಷಕರು ಬೇಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಕಷ್ಟಪಟ್ಟು ಹಾಲ್ಗಳಿಗೆ ಹಣ ಕಟ್ಟಿದ್ದೆವು. ಆದರೆ ಇದೀಗ ಸಾವಿರಾರು ಮಂದಿಯನ್ನ ಕರೆದು ಮದುವೆ ಮಾಡಲು ಸರ್ಕಾರ ಒಪ್ಪಿಗೆ ನೀಡುತ್ತಿಲ್ಲ. ಒಪ್ಪಿಗೆ ನೀಡಿಲ್ಲ ಎನ್ನುವುದಕ್ಕಿಂತಲೂ ಕೊರೊನಾ ಜನರನ್ನ ಹಿಂಡಿ ಹಿಪ್ಪೆಮಾಡುತ್ತಿದೆ. ಹಾಗಾಗಿ ಸರಳವಾಗಿ ಮದುವೆಯನ್ನು ಮಾಡುವುದಕ್ಕೆ ಮುಂದಾಗಿದ್ದೀವಿ. ಹಾಲ್ಗಳಿಗೆ ಕಟ್ಟಿರುವ ಹಣವನ್ನ ವಾಪಸ್ ಮಾಡಿ ಎಂದು ಮಾಲೀಕರಲ್ಲಿ ಕೇಳಿದರೆ ನಾವೇನು ಅಡ್ಡಿ ಮಾಡಿಲ್ಲ, ಮದುವೆಗೆ ನಿರ್ಬಂಧ ವಿಧಿಸಿರುವುದು ಸರ್ಕಾರ. ಹಾಗಾಗಿ ವಾಪಸ್ ಹಣ ಕೊಡುವ ಮಾತೇ ಇಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ಪರಿಸ್ಥಿತಿಯನ್ನು ಈಗ ಕೇಳುವವರು ಯಾರು ಎಂದು ಹಾಲ್ಗೆ ಹಣ ಕಟ್ಟಿದವರು ಅಳಲು ತೋಡಿಕೊಂಡಿದ್ದಾರೆ.
ಸದ್ಯ ಒಳ್ಳೆ ಮುಹೂರ್ತ ಇರುವುದರಿಂದ ನೂರಾರು ಮದುವೆಗಳು ಏಪ್ರಿಲ್-ಮೇ ತಿಂಗಳಲ್ಲಿ ಜಿಲ್ಲೆಯಾದ್ಯಂತ ನಡೆಯುತ್ತಿವೆ. ಕೊರೊನಾ ಕಾಟ ಕಳೆದ ಬಾರಿ ಕಾಣಿಸಿಕೊಂಡಿದ್ದರಿಂದ ಈ ಬಾರಿ ಎಲ್ಲವೂ ಸರಿಯಾಗಿ ಇರುತ್ತೆ, ಯಾವುದೇ ಸಮಸ್ಯೆ ಇರಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೊರೊನಾ ಎರಡನೇ ಅಲೆ ಜನರ ಯೋಜನೆಯನ್ನು ಮೊಟಕುಗೊಳಿಸಿದೆ. ಈ ಮಧ್ಯೆ ಹಾಲ್ಗಳಿಗೆ ಹಣ ಕಟ್ಟಿದ ವಧು-ವರರ ಪೋಷಕರಂತೂ ಹಣ ವಾಪಸ್ ಕೊಡಿ ಎಂದು ಮಾಲೀಕರ ಬಳಿ ಬೇಡಿಕೊಳ್ಳುವಂತಾಗಿದೆ. ಜಿಲ್ಲಾಡಳಿತವಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಈ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಿ ನೊಂದವರ ಸಮಸ್ಯೆಯನ್ನ ಬಗೆಹರಿಸಬೇಕಿದೆ.
