ಕೊರೊನಾ ವೈರಸ್ ಎರಡನೇ ಅಲೆಗೆ ಭಾರತದಲ್ಲಿ ಹೆಣಗಳು ಉರುಳುತ್ತಿವೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಪರಿಸ್ಥಿತಿಯಂತೂ ಕೈ ಮೀರಿ ಹೋಗುತ್ತಿದೆ. ಹಾಗಾಗಿ ಅಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಏ.14ರಿಂದ 15 ದಿನಗಳ ಲಾಕ್ಡೌನ್ ಜಾರಿಯಲ್ಲಿದೆ. ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಅನೇಕ ಕಲಾವಿದರ ಜೀವನಕ್ಕೆ ತೊಂದರೆ ಆಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ತುಂಬ ಕಷ್ಟದ ದಿನಗಳು ಬರಲಿವೆ ಎಂದು ಹಿರಿಯ ನಟ ಆಯುಬ್ ಖಾನ್ ಹೇಳಿದ್ದಾರೆ.
ಸಿನಿಮಾ ಮತ್ತು ಧಾರಾವಾಹಿ ಚಿತ್ರೀಕರಣ ಸ್ಥಗಿತಗೊಂಡರೆ ಕಲಾವಿದರು ಮತ್ತು ತಂತ್ರಜ್ಞರು ಕಷ್ಟ ಅನುಭವಿಸಬೇಕಾಗುತ್ತದೆ. ಕಳೆದ ವರ್ಷ ಲಾಕ್ಡೌನ್ನಲ್ಲಿ ಅನೇಕ ನಟ-ನಟಿಯರು ಆತ್ಮಹತ್ಯೆಗೆ ಶರಣಾದ ಉದಾಹರಣೆ ಇದೆ. ಈ ವರ್ಷ ಮತ್ತೆ ಲಾಕ್ಡೌನ್ ಮುಂದುವರಿದರೆ ಸಂಕಷ್ಟ ಎದುರಾಗುತ್ತದೆ ಎಂದು ಆಯುಬ್ ಖಾನ್ ಆತಂಕ ಪಟ್ಟಿದ್ದಾರೆ.
ಸದ್ಯ ಆಯುಬ್ ಖಾನ್ ಅವರಿಗೆ 53 ವರ್ಷ. ಕಳೆದ ಒಂದೂವರೆ ವರ್ಷದಿಂದ ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ಇಷ್ಟು ದಿನಗಳ ಕಾಲ ಕೂಡಿಟ್ಟಿದ್ದ ಹಣವನ್ನು ಅವರು ತುಂಬಾ ಜೋಪಾನವಾಗಿ ಖರ್ಚು ಮಾಡುತ್ತಿದ್ದಾರಂತೆ. ‘ನಾವೆಲ್ಲರೂ ಈಗ ಕಷ್ಟ ಅನುಭವಿಸುತ್ತಿದ್ದೇವೆ. ಲಾಕ್ಡೌನ್ ಮುಂದುವರಿದು, ಮತ್ತೆ ಒಂದೂವರೆ ವರ್ಷ ಕೆಲಸ ಸಿಗದಿದ್ದರೆ ದೊಡ್ಡ ದುರಂತ ಎದುರಾಗಲಿದೆ’ ಎಂದು ಅವರು ಹೇಳಿದ್ದಾರೆ.
ಒಂದೂವರೆ ವರ್ಷದಿಂದ ಆಯುಬ್ ಖಾನ್ ಅವರಿಗೆ ಅವಕಾಶಗಳು ಸಿಗದ ಕಾರಣ ಈಗ ಅವರ ಬಳಿ ಸ್ವಲ್ಪ ಮಾತ್ರವೇ ಹಣ ಉಳಿದುಕೊಂಡಿದೆ. ಈಗ ಚಿತ್ರೀಕರಣ ಸ್ಥಗಿತಗೊಂಡಿರುವುದರಿಂದ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸಹಾಯಕ್ಕಾಗಿ ಕೈ ಚಾಚದೇ ಬೇರೆ ಗತಿ ಇಲ್ಲ ಎಂದು ಅವರು ಹೇಳಿದ್ದಾರೆ. ಇದು ಆಯುಬ್ ಖಾನ್ ಅವರೊಬ್ಬರ ಪರಿಸ್ಥಿತಿ ಮಾತ್ರವಲ್ಲ. ಅನೇಕ ಕಲಾವಿದರು ಇಂಥ ಕಷ್ಟ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರು ಕೂಡ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ.
Laxmi News 24×7