ಹುಬ್ಬಳ್ಳಿ: ಸರ್ಕಾರ ನಡೆಸುವ ಸಂದರ್ಭದಲ್ಲಿ ಸಾಕಷ್ಟು ಒತ್ತಡಗಳಿರುತ್ತವೆ. ವಿರೋಧ ಪಕ್ಷದಲ್ಲಿ ಇದ್ದುಕೊಂಡು ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಟೀಕೆ ಮಾಡುವಂತ ಕಾಲವಲ್ಲ. ಪರಿಸ್ಥಿತಿ ನಿಭಾಯಿಸುವಲ್ಲಿ ಸಾಕಷ್ಟು ಒತ್ತಡಗಳಿರುತ್ತವೆ. ಅವುಗಳ ಬಗ್ಗೆ ಸಲಹೆ ಸೂಚನೆ ನೀಡಲಿ ಅದನ್ನು ತುಘಲಕ್ ಆಡಳಿತ ಎಂದು ಕೊರೊನಾ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯನವರು ಸರ್ಕಾರ ತಪ್ಪು ಮಾಡಿದ್ದರೇ ಸಲಹೆ ಸೂಚನೆಗಳನ್ನು ನೀಡಲಿ ಎಂದರು.
ಇನ್ನೂ ಸಚಿವ ಶ್ರೀರಾಮುಲು ಪ್ರಚಾರದ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಒಬ್ಬ ಸಚಿವನಾಗಿ ಹೇಳುತ್ತಿದ್ದೇನೆ ಇಂತಹ ಸಂದರ್ಭಗಳಲ್ಲಿ ನೂರಾರು ಜನರನ್ನು ಸೇರಿಸಿಕೊಂಡು ಪ್ರಚಾರ ಮಾಡುವುದು ಸರಿಯಲ್ಲ. ಸಚಿವರು ಇದನ್ನು ಕೈ ಬಿಟ್ಟು ಸರ್ಕಾರ ನಿರ್ದೇಶನವನ್ನು ಪಾಲಿಸಬೇಕು ಎಂದು ಅವರು ಸೂಚನೆ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಮೂರು ಕ್ಷೇತ್ರದಲ್ಲಿ ಚುನಾವಣೆ ನಡೆಸಿದ ಕುರಿತು ಪ್ರತಿಕ್ರಿಯೆ ನೀಡಿ, ಚುನಾವಣೆ ನಡೆಸುವ ಸಂದರ್ಭದಲ್ಲಿ ಕೆಲವೊಮ್ಮೆ ಹಾಗೆಲ್ಲ ಆಗುತ್ತದೆ. ಚುನಾವಣೆಯೇ ಮುಖ್ಯ ಅಂತ ಅಲ್ಲ ಅದಕ್ಕೂ ಕೂಡ ಆಧ್ಯತೆ ನೀಡಿ ಪರಿಸ್ಥಿತಿ ನಿಭಾಯಿಸಿದ್ದೇವೆ ಎಂದರು.