Breaking News

ನೀತಿಪಾಠ ಹೇಳುವ ಮೋದಿ, ಕೊರೊನಾ ಸಂದಿಗ್ಧತೆಯಲ್ಲೂ ಬಂಗಾಳದಲ್ಲಿ ಜನ ಕಂಡು ಖುಷಿಪಟ್ಟಿದ್ದೇಕೆ?

Spread the love

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ರಾಜಕಾರಣಿಗಳು ಕೊರೊನಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ನ್ಯಾಯಾಲಯ ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿತು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೊರೊನಾ ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿವೆ. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಉಪದೇಶ ನೀಡುವ ಪ್ರಧಾನಿ ನರೇಂದ್ರ ಮೋದಿಯವರೇ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದಲ್ಲಿ ಹೆಚ್ಚು ಜನ ಸೇರಿಸಿ, ಪ್ರಶಂಸೆ ವ್ಯಕ್ತಪಡಿಸಿ ತಾವೇ ರೂಪಿಸಿದ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು, ಎಷ್ಟರ ಮಟ್ಟಿಗೆ ಸರಿ. ಇಂತಹ ಬೇಜವಾಬ್ದಾರಿಯನ್ನು ಪ್ರಧಾನಿಯನ್ನು ಈ ದೇಶ ಹಿಂದೆಂದೂ ಕಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪದೇ ಪದೇ ದೇಶ ಮಾನ, ಮಾರ್ಯದೆಯನ್ನು ಕಳೆಯುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆ, ಹೇಸಿಗೆ ಇದ್ದರೆ ಈ ರೀತಿ ಮಾಡುತ್ತಿರಲಿಲ್ಲ. ಈ ದೇಶದ ಕಾನೂನನ್ನು ಗೌರವಿಸುವ ಅಧಿಕಾರಿಗಳು ಅವರ ಮೇಲೆ ಕೋವಿಡ್ ನಿಯಮ ಉಲ್ಲಂಘನೆಗಾಗಿ ಪ್ರಕರಣ ದಾಖಲಿಸಬೇಕು. ನ್ಯಾಯಾಲಯವಾದರೂ ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಳ್ಳಬೇಕು ಎಂದು ನಾಗೇಂದ್ರ ಆಗ್ರಹಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವರು ಹಾಗೂ ವಿರೋಧ ಪಕ್ಷದ ಮುಖಂಡರು ಕೂಡ ಉಪ-ಚುನಾವಣೆ ಸಂದರ್ಭದಲ್ಲಿ ಕೊರೊನಾ ನಿಬಂಧನೆಗಳನ್ನು ಗಾಳಿಗೆ ತೂರಿದ್ದಾರೆ. ಇವರಗಳ ಮೇಲೂ ಯಾವುದೇ ಕ್ರಮ ಜರುಗಿಸದೇ ಇರುವುದು ನಮ್ಮ ಕಾನೂನು ವ್ಯವಸ್ಥೆಯನ್ನು ಕಾಪಾಡುವ ಕಾರ್ಯಾಂಗದ ನಿಶ್ಯಕ್ತತನವನ್ನು ತೋರಿಸುತ್ತದೆ ಎಂದು ಖಂಡಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಬೇಕು:
೨ನೇ ಅಲೆಯ ಮನ್ಸೂಚನೆಯನ್ನು ಗ್ರಹಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದ್ದರಿಂದಲೇ ಕೊರೊನಾ ಅತಿ ವೇಗವಾಗಿ ಹರಡುತ್ತಿದೆ. ಈಗ ಆಸ್ಪತ್ರೆಗಳಲ್ಲಿ ಹಸಿಗೆಗಳು ಸಿಗುತ್ತಿಲ್ಲ. ಆಕ್ಸಿಜನ್ ಕೊರತೆ ಎದುರಾಗಿದೆ. ಈಗಲಾದರೂ ಸರ್ಕಾರ ಮಾನವೀಯತೆಯಿಂದ ವರ್ತಿಸಿ ಜನರ ರಕ್ಷಣೆ ಮುಂದಾಗಬೇಕು ಮನವಿ ಮಾಡಿದರು.

ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ನಿಗಿಸಬೇಕು. ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಶೇ.೫೦ರಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ಮೀಸಲಿಡಬೇಕು. ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತ್ಸೆ ನೀಡಬೇಕು, ಕೊರೊನಾ ಲಸಿಕೆಯ ಕೊರತೆಯನ್ನು ತಕ್ಷಣವೇ ನಿಗಿಸಿ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ಹಾಕಿಸಬೇಕು. ಕೊರೊನಾ ಸಂಕಷ್ಟದಲ್ಲಿ ಅತ್ಯಂತ ಕಷ್ಟಕ್ಕೆ ಒಳಗಾಗಿರುವ ರೈತ ಸಮುದಾಯಕ್ಕೆ ಕೃಷಿ ಸಾಲಗಳನ್ನು ವಿಸ್ತರಿಸಬೇಕು. ಕೃಷಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿಗಾಗಿ ಯೋಜನೆಯನ್ನು ೨೦೦ ದಿನಕ್ಕೆ ವಿಸ್ತರಿಸಬೇಕು. ಪಡಿತರ ವ್ಯವಸ್ಥೆಯನ್ನು ಹೆಚ್ಚು ಮಾಡಬೇಕು ಎಂದು ಕೋರಿದರು.

ಏ.೨೩ರಂದು ರಾಜ್ಯದ ಎಲ್ಲ ಸಂಸದರ ಕಚೇರಿಯ ಮುಂದೆ ಘೇರಾವ್‌:
ನರೇಂದ್ರ ಮೋದಿ ಅವರು ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳುತ್ತಲೇ ಕೃಷಿ ಉತ್ಪನ್ನಗಳ ವೆಚ್ಚನ್ನು ಪ್ರತಿ ವರ್ಷ ದ್ವಿಗುಣಗೊಳಿಸುತ್ತಿದ್ದಾರೆ. ಗೊಬ್ಬರದ ಬೆಲೆಯನ್ನು ಏರಿಸಿ ಕೃಷಿಕರು ಕೃಷಿಯಿಂದಲೇ ವಿಮುಖವಾಗುವಂತೆ ಹುನ್ನಾರ ನಡೆಸಿದ್ದಾರೆ. ಇಂತಹ ಹುನ್ನಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ಏ.೨೩ರಂದು ರಾಜ್ಯದ ಎಲ್ಲ ಸಂಸದರ ಕಚೇರಿಗಳ ಮುಂದೆ ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೧೨.೩೦ರವರೆಗೆ ಪಿಕೆಟಿಂಗ್ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಸ್ಕಾಂಗಳ ಮುಂದೆಯೂ ಪ್ರತಿಭಟನೆ: ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿರುವುದನ್ನು ಖಂಡಿಸಿ ಟ್ರಾನ್ಸ್‌ಫಾರ್ಮ್ ದುರಸ್ತಿ ಮತ್ತು ಅಳವಡಿಕೆ ವಿಳಂಬವನ್ನು ಪ್ರತಿಭಟಿಸಿ ಎಸ್ಕಾಂಗಳ ಭ್ರಷ್ಟಾಚಾರವನ್ನು ವಿರೋಧಿ ಪ್ರತಿ ಜಿಲ್ಲೆಯಲ್ಲೂ ಎಸ್ಕಾಂ ಕಚೇರಿಗಳ ಮುಂದೆ ಶೀಘ್ರದಲ್ಲೇ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಮರಂಕಯ್ಯ, ರೈತ ಮುಖಂಡ ಎನ್.ಪ್ರಸನ್ನ ಗೌಡ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸರಗೂರು ನಟರಾಜು, ದಲಿತ ಸಂಘರ್ಷ ಸಮಿತಿಯ ಕಲ್ಲಹಳ್ಳಿ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.


Spread the love

About Laxminews 24x7

Check Also

ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ ಅವಳಿನಗರದಲ್ಲಿನ 400 ಡ್ರಗ್ ಪೆಡ್ಲರ್ಸ್ ಹಾಗೂ ಸೇವನೆ ಮಾಡುವವರ ಪರೇಡ್

Spread the love ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ