ನವದೆಹಲಿ, ಏಪ್ರಲ್ 14: ಕಾಂಗ್ರೆಸ್ ಪಕ್ಷವು ತನ್ನದೇ ಸ್ವಂತ ಡಿಜಿಟಿಲ್ ವೇದಿಕೆ ‘ಐಎನ್‌ಸಿ ಟಿವಿ’ಯನ್ನು ಏ. 14ರಂದು ಆರಂಭಿಸುತ್ತಿದೆ. ಪಕ್ಷದ ಸಂದೇಶಗಳು, ವಿಚಾರಗಳನ್ನು ನೇರವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಅದು ಈ ಚಾನೆಲ್ ಆರಂಭಿಸುತ್ತಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ತನ್ನ ಆನ್‌ಲೈನ್ ವೇದಿಕೆಯ ಹೆಚ್ಚಿನ ವಿವರಗಳನ್ನು ಅದು ನೀಡಲಿದೆ.
ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ, ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಸುಷ್ಮಿತಾ ದೇವ್ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು ಸುದ್ದಿಗೋಷ್ಠಿಯಲ್ಲಿ ಪಕ್ಷದ ಚಾನೆಲ್ ಕುರಿತಾದ ಮಾಹಿತಿ ನೀಡಲಿದ್ದಾರೆ.
ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ಆರೋಪಗಳನ್ನು ಮಾಡುವ, ಪಕ್ಷದ ಸಂದೇಶಗಳನ್ನು ಜನರಿಗೆ ನೇರವಾಗಿ ತಲುಪಿಸುವ ಹಾಗೂ ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಸಲುವಾಗಿ ಕಾಂಗ್ರೆಸ್ ಈ ವೇದಿಕೆಯನ್ನು ಬಳಸಿಕೊಳ್ಳಲಿದೆ. ಮುಖ್ಯವಾಗಿ ಪಕ್ಷದ ವಿಚಾರಧಾರೆಗಳನ್ನು ಜನರಿಗೆ ತಲುಪಿಸಲು ಆಧುನಿಕ ಮಾಧ್ಯಮವಾದ ತನ್ನದೇ ಆನ್‌ಲೈನ್ ವೇದಿಕೆಯನ್ನು ಸೃಷ್ಟಿಸಲು ಕಾಂಗ್ರೆಸ್ ಮುಂದಾಗಿದೆ.
ಈಗಾಗಲೇ ಕಾಂಗ್ರೆಸ್ ತನ್ನ ಮುಖವಾಣಿಯಾಗಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹೊಂದಿದೆ. ಈಗ ಯೂಟ್ಯೂಬ್‌ನಲ್ಲಿ ತನ್ನದೇ ಚಾನೆಲ್ ಹೊಂದಲಿದ್ದು, ಪಕ್ಷಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಜನರಿಗೆ ತಲುಪಿಸಲಿದೆ.