ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಲೀಗಲ್ ನೋಟಿಸ್ ನೀಡಲು ಸಿಎಂ ಯಡಿಯೂರಪ್ಪ ಅವರು ತಯಾರಿ ಮಾಡಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಕೊರೊನಾ ವಿಚಾರದಲ್ಲಿ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಲೀಗಲ್ ನೋಟಿಸ್ ನೀಡಲು ಸರ್ಕಾರದ ಮಟ್ಟದಲ್ಲಿ ತಯಾರಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಆರೋಪ ಬಗ್ಗೆ ಈಗಾಗಲೇ ನಮ್ಮ 5 ಜನ ಮಂತ್ರಿಗಳು ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಾನು ಮತ್ತೆ ಅದರ ಬಗ್ಗೆ ಹೇಳೋದು ಸರಿಯಲ್ಲ. ಅವರಿಗೆ ಲೀಗಲ್ ನೋಟಿಸ್ ಕೊಡಲು ತಯಾರಿ ನಡೆದಿದೆ. ಅದರ ಬಗ್ಗೆ ಯಡಿಯೂರಪ್ಪನವರು ಹೇಳುತ್ತಾರೆ. ಸಿಎಂ ಅದರ ಬಗ್ಗೆ ತೀರ್ಮಾನ ಮಾಡಿ ನೋಟಿಸ್ ನೀಡುತ್ತಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇದೇ ವೇಳೆ ಬಿಮ್ಸ್ ಎದುರು ಅಂಬುಲೆನ್ಸ್ ಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ಮಾಡಿದ ವಿಚಾರ ಬಗ್ಗೆ ಮಾತನಾಡಿ, ಬಿಮ್ಸ್ ನಲ್ಲಿ ನಡೆದಂತಹ ಘಟನೆ ಬಗ್ಗೆ ಈಗಾಗಲೇ ಸಿಎಂ ಜೊತೆ ಚರ್ಚಿಸಿದ್ದೇನೆ. ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಮುಂದಿನ ಎರಡು ಮೂರು ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ಕೊರೊನಾ ಬಗ್ಗೆ ಜನರು ಭಯ ಪಡುವ ಅವಶ್ಯಕತೆ ಇಲ್ಲ. ಜನರ ಸಹಕಾರ ನಮಗೆ ಬೇಕು, ಜನರು ಜಾಗೃತವಾಗಿರಬೇಕು ಎಂದು ಹೇಳಿದರು.

ಕಳೆದ ರಾತ್ರಿ ತಮ್ಮ ನಿವಾಸದಲ್ಲಿ ನಡೆದ ಸಭೆಯ ಬಗ್ಗೆ ಮಾತನಾಡಿದ ಜಾರಕಿಹೊಳಿ, ನಾನು ಯಾವ ಸಭೆಯನ್ನು ನಡೆಸಿಲ್ಲ. ಹೆಚ್.ವಿಶ್ವನಾಥ್ ಪರಿಷತ್ ಸದಸ್ಯರಾಗಿದ್ದಕ್ಕೆ ಸಂತೋಷವಾಗಿದೆ. ಮಂತ್ರಿ ಮಂಡಲ ರಚನೆ ಮಾಡುವುದು ಸಿಎಂ ಪರಮಾಧಿಕಾರ, ಮಂತ್ರಿ ಮಂಡಳಕ್ಕೆ ಯಾರನ್ನು ತಗೋಬೇಕು, ಬಿಡಬೇಕು ಎಂಬುದು ಹೈಕಮಾಂಡ್ ನಿರ್ಣಯ ಮಾಡುತ್ತದೆ. ಅದರ ಬಗ್ಗೆ ನಮ್ಮ ಅನಿಸಿಕೆ ಏನೂ ಇಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
Laxmi News 24×7