ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 63ರ ಹೆಬ್ಬುಳ ಬಳಿ ಮಂಗಳವಾರ ಕಾರು ಮತ್ತು ಲಾರಿಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.
ತಾಲ್ಲೂಕಿನ ಅವರ್ಸಾದ ಗುರುಪ್ರಸಾದ ಅಣ್ವೇಕರ (32) ಹಾಗೂ ಅವರ ಅಕ್ಕನ ಮಗಳು ಸಂಜನಾ ಸಂತೋಷ ರಾಯ್ಕರ (7) ಮೃತರು.
ಸಂತೋಷ ರಾಯ್ಕರ, ಪತ್ನಿ ಅಶ್ವಿನಿ ರಾಯ್ಕರ , ಮಗ ಸೋಹಂ ರಾಯ್ಕರ ಹಾಗೂ ಪ್ರೀತಂ ರೇವಣಕರ ಇವರಿಗೆ ಗಾಯಗಳಾಗಿದ್ದು, ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುಪ್ರಸಾದ ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿರುವ ತಮ್ಮ ಅಕ್ಕನ ಕುಟುಂಬವನ್ನು ಯುಗಾದಿ ಹಬ್ಬದ ನಿಮಿತ್ತ ಅವರ್ಸಾಕ್ಕೆ ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದರು. ಅವರ ಸ್ನೇಹಿತ ಪ್ರೀತಮ್ ರೇವಣಕರ ಜೊತೆಗಿದ್ದರು. ಮಹಾರಾಷ್ಟ್ರ ಮೂಲದ ಲಾರಿ ಅಂಕೋಲಾದಿಂದ ಯಲ್ಲಾಪುರ ಮಾರ್ಗವಾಗಿ ಚಲಿಸುತ್ತಿತ್ತು. ಹೆಬ್ಬುಳದ ಬಳಿಯಲ್ಲಿ ಲಾರಿ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮೃತ ಗುರುಪ್ರಸಾದ ಉತ್ತಮ ವಾಲಿಬಾಲ್ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬ ಮತ್ತು ಗ್ರಾಮಸ್ಥರಲ್ಲಿ ಶೋಕದ ಛಾಯೆ ಮೂಡಿಸಿದೆ. ಸುದ್ದಿ ತಿಳಿದ ತಕ್ಷಣ ಹೆದ್ದಾರಿ ಗಸ್ತು ವಾಹನದ ಸಿಬ್ಬಂದಿ ಹಾಗೂ ಸಿ.ಪಿ.ಐ ಕೃಷ್ಣಾನಂದ ನಾಯಕ, ಪಿ.ಎಸ್.ಐ ಈ.ಸಿ.ಸಂಪತ್ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7