ಬೆಂಗಳೂರು,ಜು.25-ಹಿಂದೂಗಳ ಪವಿತ್ರ ಹಬ್ಬವಾದ ಹಾಗೂ ಶ್ರಾವಣ ಮಾಸದ ಪ್ರಥಮ ಹಬ್ಬವಾದ ನಾಗರಪಂಚಮಿ ಮೇಲೆ ಈ ಬಾರಿ ಕೊರೊನಾ ಕರಿನೆರಳು ಆವರಿಸಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅದ್ಧೂರಿಯಾಗಿ ವಿಶಿಷ್ಟವಾಗಿ ನಾಗರಪಂಚಮಿಯನ್ನು ಆಚರಿಸಲಾಗುತ್ತಿತ್ತು. ಆದರೆ ಸಾಂಕ್ರಾಮಿಕ ರೋಗ ಕೊರೊನಾ ಆವರಿಸಿರುವುದರಿಂದ ನಾಗರಪಂಚಮಿ ಆಚರಣೆ ವಿರಳವಾಗಿತ್ತು.
ಜನ ಸಂಪ್ರದಾಯಿಕವಾಗಿ ಸರಳವಾಗಿ ನಾಗರಪಂಚಮಿಯನ್ನು ಆಚರಿಸಿದರು. ಕೆಲವರು ತಮ್ಮ ಮನೆಯಲ್ಲಿ ಆಚರಿಸಿದರೆ ಮತ್ತೆ ಕೆಲವರು ದೇವಸ್ಥಾನಗಳಿಗೆ ತೆರಳಿ ಸಾಮಾಜಿಕ ಅಂತರ ಕಾಯ್ದುಕೊಂಡು ನಾಗದೇವರಿಗೆ ಹಾಲನ್ನೆರೆದು ಪಂಚಮಿ ಆಚರಣೆ ಮಾಡಿದರು.
ದೇವಾಲಯಗಳಿಗೆ ಹೋದರೆ ಅಲ್ಲಿ ಜನರ ಗುಂಪು ಸೇರಿ ಎಲ್ಲಿ ತಮಗೆ ಕೊರೊನಾ ತಗುಲುತ್ತದೋ ಎಂಬ ಆತಂಕದಿಂದ ಜನ ಮನೆಗಳಲ್ಲಿಯೇ ಬೆಳ್ಳಿ ನಾಗನಿಗೆ, ಫೋಟೊದಲ್ಲಿರುವ ನಾಗನಿಗೆ ಹಾಲನ್ನೆರೆದು ಭಕ್ತಿ ಸಮರ್ಪಿಸಿದರು.
ಅಣ್ಣ-ತಂಗಿಯರ ಹಬ್ಬ, ಒಡಹುಟ್ಟಿದವರ ಹಬ್ಬ ಎಂದೇ ಪ್ರತೀಕವಾಗಿರುವ ನಾಗರಪಂಚಮಿಯನ್ನು ಬೆಳ್ಳಂಬೆಳಗ್ಗೆ ಮಡಿ ಉಡಿ ಉಟ್ಟು ತಮ್ಮ ಕುಟುಂಬದವರೊಂದಿಗೆ ದೇವಸ್ಥಾನಗಳಿಗೆ ತೆರಳಿ ನಾಗರ ಕಲ್ಲಿಗೆ ಹಾಲನ್ನೆರೆಯುತ್ತಿದ್ದರು.
ಉತ್ತರಕರ್ನಾಟಕದಲ್ಲಿ ಈ ಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತದೆ. ಆದರೆ ಆ ಭಾಗದಲ್ಲೂ ಕೂಡ ಕೊರೊನಾ ಸೋಂಕು ಹೆಚ್ಚಾಗಿರುವುದರಿಂದ ಹಬ್ಬ ಆಚರಣೆ ಅಷ್ಟಾಗಿ ಕಂಡುಬರಲಿಲ್ಲ.
ಬೆಂಗಳೂರಿನ ಹಲವು ದೇವಾಲಯಗಳಲ್ಲಿ ನಾಗಭಕ್ತರ ಸಂಖ್ಯೆ ವಿರಳವಾಗಿತ್ತು. ಬಂದ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಪೂಜೆಗಳನ್ನು ಸಲ್ಲಿಸುತ್ತಿದ್ದರು.
ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್‍ರೋಡ್‍ನಲ್ಲಿರುವ ನಾಗದೇವಾಲಯ, ಶಂಕರಮಠ ಸಮೀಪದ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಗೆಳೆಯರ ಬಳಗ ಸಮೀಪವಿರುವ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಮಹಾಲಕ್ಷ್ಮಿಲೇಔಟ್, ರಾಜಾಜಿನಗರ, ಬಸವನಗುಡಿ ಸೇರಿದಂತೆ ನಗರದ ಹಲವೆಡೆ ಇರುವ ನಾಗದೇವನಹ ದೇಗುಲಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಘಾಟಿ ಸುಬ್ರಹ್ಮಣ್ಯಸ್ವಾಮಿ, ಕುಕೆ ಸುಬ್ರಹ್ಮಣ್ಯ ಸ್ವಾಮಿ ಸೇರಿದಂತೆ ಹಲವು ಮುಜರಾಯಿ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ದೇವಸ್ಥಾನದ ಅರ್ಚಕರು ಸಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.