ಹುಬ್ಬಳ್ಳಿ: ತನ್ನನ್ನು ವಜಾ ಮಾಡುವುದಾಗಿ ಹೇಳಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಅವರ ಹೇಳಿಕೆಗೆ ಬಸನಗೌಡ ಪಾಟೀಲ ಯತ್ನಾಳ ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿ ಕುಟುಂಬದ ಭ್ರಷ್ಟಾಚಾರ, ಕುಟುಂಬ ರಾಜಕಾರಣ ವಿರುದ್ಧ ಮಾತನಾಡಿದ್ದೇನೆ. ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ಮೊದಲು ಉಚ್ಛಾಟಿಸಲಿ ನಂತರ ನನ್ನ ಬಗ್ಗೆ ಚಿಂತನೆ ಮಾಡಲಿ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಡಿ ಅಂತ ಎಂದೂ ಯಾರಿಗೂ ಹೇಳಿಲ್ಲ. ನೀವೆ ತಂದೆ ನೀವೆ ತಾಯಿ ಎಂದು ದಯನೀಯವಾಗಿ ಕೇಳುವ ಮನುಷ್ಯ ನಾನಲ್ಲ. ಯತ್ನಾಳ ಅವರನ್ನು ಪಕ್ಷದಿಂದ ಹೊರ ಹಾಕುತ್ತೇವೆ ಎಂದು ಹೆದರಿಸಿದರೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದನ್ನು ನಿಲ್ಲಿಸುತ್ತಾರೆ ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ತಿರುಗೇಟು ನೀಡಿದರು.
ಭ್ರಷ್ಟಾಚರದಲ್ಲಿ ತೊಡಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬವನ್ನು ಮೊದಲು ಉಚ್ಛಾಟನೆ ಮಾಡಲಿ. ಆ ಮೇಲೆ ಯತ್ನಾಳ ಉಚ್ಛಾಟನೆ ಮಾಡುವ ಬಗ್ಗೆ ಚಿಂತನೆ ಮಾಡಲಿ. ಅರುಣ ಸಿಂಗ್ ದೆಹಲಿಯಿಂದ ಬರುತ್ತಲೇ ಯಡಿಯೂರಪ್ಪ ಅವರನ್ನು ಖುಷ್ ಮಾಡಲು ಯತ್ನಾಳಗೆ ಬೈದು, ವಿಮಾನದಲ್ಲಿ ನಗುಮುಖದಿಂದ ಹೋಗುತ್ತಾರೆ. ಇದಕ್ಕೆ ಕಾರಣವೇನು ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಲ ಬಂದಾಗ ಅದನ್ನು ಹೇಳುತ್ತೇನೆ. ಅವರು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೊರತು ಯಡಿಯೂರಪ್ಪ, ವಿಜಯೇಂದ್ರ ಕಾರ್ಯದರ್ಶಿ ಅಲ್ಲ. ಯಡಿಯೂರಪ್ಪ ಅವರ ಮರಿಮೊಮ್ಮಕ್ಕಳು ಬಂದು ವರ್ಗಾವಣೆಗೆ ಅರ್ಜಿ ಹಿಡಿದು ನಿಲ್ಲುವ ಕಾಲ ದೂರವಿಲ್ಲ ಎಂದು ವಾಗ್ದಾಳಿ ನಡೆಸಿದರು