Breaking News

ಅನ್ಯಾಯದ ಬ್ರಹ್ಮಾಸ್ತ್ರ ಬೇಡ: ಮಾತುಕತೆಗೆ ಮುಂದಾಗಿ -ಕೋಡಿಹಳ್ಳಿ ಚಂದ್ರಶೇಖರ್

Spread the love

ಬೆಂಗಳೂರು: ‘ಸಾರಿಗೆ ನೌಕರರ ಮುಷ್ಕರವನ್ನು ಹತ್ತಿಕ್ಕಲು ಅನ್ಯಾಯದ ಬ್ರಹ್ಮಾಸ್ತ್ರದ ಮಾರ್ಗಗಳನ್ನು ಸರ್ಕಾರ ಅನುಸರಿಸುತ್ತಿದೆ. ಅದನ್ನು ಬಿಟ್ಟು ಮಾತುಕತೆಗೆ ಮುಂದಾಗಬೇಕು’ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

‘ಸಾರಿಗೆ ಸಿಬ್ಬಂದಿಗೆ ನೋಟಿಸ್ ನೀಡಲಾಗುತ್ತಿದೆ. ತರಬೇತಿ ಮತ್ತು ಪ್ರೊಬೇಷನರಿ ಅವಧಿಯಲ್ಲಿರುವ ಸಿಬ್ಬಂದಿಯನ್ನು ವಜಾಗೊಳಿಸಲಾಗುತ್ತಿದೆ. ನಿಗಮ ನೀಡಿರುವ ಮನೆಗಳನ್ನು ಖಾಲಿ ಮಾಡಿಸುವ ಪ್ರಯತ್ನಗಳೂ ನಡೆಯುತ್ತಿವೆ. ನೌಕರರನ್ನು ಮನೆಗಳಿಂದ ದಬ್ಬುವ ಪ್ರಯತ್ನ ಸರಿಯಲ್ಲ. ಇವೆಲ್ಲವೂ ಪ್ರಜಾಪ್ರಭುತ್ವ ವಿರೋಧಿ ನಡೆಗಳು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಆರೋಗ್ಯದ ಕಾರಣಗಳನ್ನು ನೀಡಿ ‌ಸೇವೆಯಲ್ಲಿರುವ ಹಿರಿಯ ನೌಕರರನ್ನು ಮನೆಗೆ ಕಳುಹಿಸುವ ಪ್ರಯತ್ನ ಒಂದೆಡೆ ನಡೆಯುತ್ತಿದೆ. ಇನ್ನೊಂದೆಡೆ ನಿವೃತ್ತ ನೌಕರರನ್ನು ವಾಪಸ್ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ತರಬೇತಿ ಅವಧಿಯ ಸಿಬ್ಬಂದಿಗಳ ಕೈಗೆ ಪ್ರಯಾಣಿಕರು ಇರುವ ಬಸ್‌ಗಳನ್ನು ಕೊಡುವುದು ಸರಿಯಲ್ಲ. ಈ ಎಲ್ಲಾ ಪ್ರಯತ್ನದ ಮೂಲಕ ಸರ್ಕಾರ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ’ ಎಂದರು.

‘ಮಾರ್ಚ್ ತಿಂಗಳ ವೇತನ ತಡೆ ಹಿಡಿಯುವ ಮೂಲಕ ಸಾರಿಗೆ ನೌಕರರು ಯುಗಾದಿ ಹಬ್ಬ ಆಚರಣೆ ಮಾಡದಂತೆ ಸರ್ಕಾರ ಮಾಡಿದೆ. ಮುಖ್ಯಮಂತ್ರಿ ಅವರು ಮಾತ್ರ ಹೋಳಿಗೆ-ತುಪ್ಪದ ಊಟ ಮಾಡಿದರೆ ಸಾಕೆ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿರುವ 76 ನಿಗಮಗಳಲ್ಲಿ 4 ಸಾರಿಗೆ ನಿಗಮಗಳ ನೌಕರರಿಗೆ ಮಾತ್ರ ಏಕೆ ತಾರತಮ್ಯ. ಬೇರೆ ನಿಗಮಗಳ ನೌಕರರಿಗೆ ಯುಗಾದಿ ಬೋನಸ್ ದೊರೆಯುತ್ತಿದೆ. ಅದಕ್ಕೆ ವಿರೋಧ ಇಲ್ಲ. ಅವರಿಗೆ ಸರಿಸಮನಾದ ವೇತನ ಸೌಲಭ್ಯಗಳನ್ನು ನೀಡಿ ಎಂಬುದಷ್ಟೇ ನಮ್ಮ ಒತ್ತಾಯ’ ಎಂದರು.

‘ಶಾಂತಿ, ಅಹಿಂಸೆ, ಶಿಸ್ತುಬದ್ಧವಾಗಿ ಚಳವಳಿ ನಡೆಯುತ್ತಿದೆ. ಬಸ್ ನಿಲ್ದಾಣಗಳಿಗೆ ಖಾಸಗಿ ಬಸ್‌ಗಳನ್ನು ತಂದು ಕಾರ್ಯಾಚರಣೆ ಮಾಡುತ್ತಿದ್ದರೂ ಅಡ್ಡಿಪಡಿಸಲು ಬಂದಿಲ್ಲ. ಶಾಂತಿಯುತವಾಗಿ ಮುಷ್ಕರ ನಡೆಸುತ್ತಿರುವ ನೌಕರರ ವಿರುದ್ಧ ಕಠಿಣ ಕ್ರಮಗಳನ್ನು ಹೇರಬಾರದು. ಎಸ್ಮಾ, ಐಪಿಸಿ, ಸಿಆರ್‌ಪಿಸಿ ಸೆಕ್ಷನ್‌ಗಳನ್ನು ನಿಮ್ಮದೇ ನಾಗರಿಕರ ಮೇಲೆ ಹೇರುವ ಬೆದರಿಕೆ ಬೇಡ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ’ ಎಂದು ಹೇಳಿದರು.

ಮನೆ ಖಾಲಿ ಮಾಡಿಸುತ್ತಿಲ್ಲ: ಕಳಸದ
‘ಕರ್ತವ್ಯಕ್ಕೆ ಗೈರಾಗಿರುವ ಸಿಬ್ಬಂದಿಗೆ ನೋಟಿಸ್ ನೋಡಿ ಕೆಲಸಕ್ಕೆ ಬರುವಂತೆ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ. ವಸತಿ ಗೃಹಗಳಲ್ಲಿ ಇರುವ ಸಿಬ್ಬಂದಿಯನ್ನು ಖಾಲಿ ಮಾಡಿಸುವ ಪ್ರಯತ್ನ ಮಾಡುತ್ತಿಲ್ಲ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಸ್ಪಷ್ಟಪಡಿಸಿದರು.

‘ಮುಷ್ಕರದ ಮೊರೆ ಹೋದರೆ ಮುಂದಿನ ದಿನಗಳಲ್ಲಿ ತೊಂದರೆಗೆ ಸಿಲುಕಬೇಕಾಗುತ್ತದೆ ಎಂದು ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಮನವರಿಕೆ ಮಾಡಿಸುತ್ತಿದ್ದೇವೆ. ಮನೆ ಖಾಲಿ ಮಾಡಿಸುವ ರೀತಿಯ ಪ್ರಯತ್ನ ಆಗಿದ್ದರೆ, ಹಾಗೆ ಮಾಡದಂತೆ ಸೂಚನೆ ನೀಡಲಾಗುವುದು’ ಎಂದು ಹೇಳಿದರು.

‘ತರಬೇತಿ ಮತ್ತು ಪ್ರೊಬೆಷನರಿ ಅವಧಿಯಲ್ಲಿರುವ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗುತ್ತಿದೆ. ದೀರ್ಘ ಗೈರು ಹಾಜರಿಯಲ್ಲಿರುವ ಸಿಬ್ಬಂದಿಯನ್ನಷ್ಟೇ ವಜಾಗೊಳಿಸಲಾಗುತ್ತಿದೆ’ ಎಂದರು.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ