ಸಾರಿಗೆ ನೌಕರರು ಹಾಗೂ ರಾಜ್ಯ ಸರ್ಕಾರದ ನಡುವಿನ ಮುಷ್ಕರ ಸಮರ ಇಂದಿಗೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರ್ಕಾರ 6ನೇ ವೇತನ ಆಯೋಗದಂತೆ ವೇತನ ಜಾರಿಗೆ ಬಿಲ್ ಕುಲ್ ಇಲ್ಲ ಅಂದಿದೆ. ಅಲ್ಲದೇ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂಬುದಾಗಿ ಪರಿಗಣಿಸುವಂತ ಬೇಡಿಕೆಗೂ ಯಾವುದೇ ಸ್ಪಷ್ಟವಾದಂತ ಉತ್ತರವನ್ನು ನೀಡಿಲ್ಲ. ಇದರ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ 2016ರ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಂತ ಬಿಎಸ್ ಯಡಿಯೂರಪ್ಪ ಹೇಳಿದ ಮಾತು, 2021ರ ಈಗ ಮುಖ್ಯಮಂತ್ರಿಯಾಗಿದ್ದಂತ ಸಂದರ್ಭದಲ್ಲಿ ಯಡಿಯೂರಪ್ಪ ಹೇಳಿದಂತ ಮಾತುಗಳು ವೈರಲ್ ಆಗಿವೆ. ಅದೇನ್ ಅಂತ ಮುಂದೆ ಓದಿ..
ಸಾರಿಗೆ ನೌಕರರು ವರ್ಸಸ್ ರಾಜ್ಯ ಸರ್ಕಾರದ ನಡುವೆ ಬೇಡಿಕೆ ಈಡೇರಿಕೆಯ ಸಮರ ನಡೆಯುತ್ತಿದೆ. ರಾಜ್ಯ ಸರ್ಕಾರ ಮುಷ್ಕರ ನಿರತ ಸಾರಿಗೆ ನೌಕರರೊಂದಿಗೆ ಇದುವರೆಗೆ ಯಾವುದೇ ಮಾತುಕತೆಯ ಪ್ರಯತ್ನಕ್ಕೂ ಇಳಿದಿಲ್ಲ. ಬದಲಾಗಿ ಖಾಸಗಿ ಬಸ್ ಗಳಿಗೆ, ವಾಹನಗಳಿಗೆ ಪುಲ್ ಪರ್ಮಿಟ್ ನೀಡಿ ಆದೇಶಿಸಿದ್ದರಿಂದಾಗಿ, ಸಾರಿಗೆ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್ ಗಳ ದರ್ಬಾರ್ ನಡೆಯುತ್ತಿದೆ. ಜೊತೆ ಜೊತೆಗೆ ಖಾಸಗಿ ಬಸ್ ಗಳ ದುಪ್ಪಟ್ಟು ದರ ಏರಿಕೆಯ ಬಿಸಿ ಕೂಡ ಪ್ರಯಾಣಿಕರಿಗೆ ತಟ್ಟಿದೆ.
ಬೆಳಗಾವಿಯಲ್ಲಿ ಸಾರಿಗೆ ನೌಕರರ ಮುಷ್ಕರದ ಬಗ್ಗೆ ಸಿಎಂ ಯಡಿಯೂರಪ್ಪ ಮಾತನಾಡಿ ಇಂದು ಸಂಜೆ ಬೆಂಗಳೂರಿಗೆ ತೆರಳಿದ ಬಳಿಕ ಚರ್ಚಿಸುತ್ತೇನೆ. ಮುಷ್ಕರ ಬಿಟ್ಟು ಕೆಲಸಕ್ಕೆ ಹಾಜರಾಗಿ. ಇಲ್ಲ ಅಂದ್ರೆ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ. ಇತ್ತ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಕೂಡ ಶೇ.30ರಷ್ಟು ಸಾರಿಗೆ ನೌಕರರ ಬೇಡಿಕೆ ಈಡೇರಿಸೋ ಮಾತೇ ಇಲ್ಲ. ಮಾತುಕತೆಗೆ ಮೂಲಕ ಚರ್ಚೆಗೆ ಬನ್ನಿ ಎಂದಿದ್ದಾರೆ.
ಇದೆಲ್ಲದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಯಡಿಯೂರಪ್ಪ ಸಾರಿಗೆ ನೌಕರರ ಮುಷ್ಕರದ ಬಗ್ಗೆ 2016ರಲ್ಲಿ ಪ್ರತಿಕ್ರಿಯಿಸಿದಂತ ಮಾತು ವೈರಲ್ ಆಗಿದೆ. 2016ರಲ್ಲಿ ಅಧಿಕಾರವಿಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಂತ ಸಂದರ್ಭದಲ್ಲಿ ಸಾರಿಗೆ ನೌಕರರ ಮುಷ್ಕರವನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಳ್ಳಬೇಡಿ. ನೌಕರರನ್ನು ಮಾತುಕತೆಗೆ ಕರೆದು ಮುಷ್ಕರ ಅಂತ್ಯಗೊಳಿಸಿ. ಎಸ್ಮಾ ಜಾರಿ ಮಾಡದೇ ಸಮಸ್ಯೆ ಪರಿಹಾರ ಕಂಡುಕೊಳ್ಳಿ. ಮುಷ್ಕರ ಮುಂದುವರೆದರೇ ಬಡವರ ಹೊಟ್ಟೆ ಮೇಲೆ ಸರ್ಕಾರೇ ಹೊಡೆದಂತೆ. ಈ ಸಮಸ್ಯೆಯ ಬಗ್ಗೆ 20 ದಿನಗಳ ಹಿಂದೆಯೇ ಮಾಹಿತಿ ಇದ್ದರೂ ಸರ್ಕಾರ ಎಚ್ಚೆತ್ತುಕೊಳ್ಳದೇ ಇರುವುದು ಖಂಡನೀಯ ಎನ್ನುವ ಮಾತು ವೈರಲ್ ಆಗಿದೆ. ಅಲ್ಲದೇ 2016ರಲ್ಲಿ ಅಧಿಕಾರದಲ್ಲಿ ಇಲ್ಲದಾಗ ಹೀಗೆ ಹೇಳಿದ್ದರು ಎಂಬುದಾಗಿ ಅವರ ಹೇಳಿಕೆಯನ್ನು ಟ್ರೋಲ್ ಮಾಡಲಾಗುತ್ತಿದೆ.
ಇದಲ್ಲದೇ 2021ರಲ್ಲಿ ಈಗ ಮುಖ್ಯಮಂತ್ರಿಯಾಗಿರುವಂತ ಬಿಎಸ್ ಯಡಿಯೂರಪ್ಪ ಅವರು ಸಾರಿಗೆ ನೌಕರರ ಮುಷ್ಕರದ ಬಗ್ಗೆ ಪರಿಸ್ಥಿತಿ ನೋಡಿ ಸಾರಿಗೆ ಮುಷ್ಕರದ ವಿರುದ್ಧ ಎಸ್ಮಾ ಜಾರಿ ಮಾಡುತ್ತೇವೆ. ನೌಕರರು ಹಠ ಬಿಟ್ಟು ಸೇವೆಗೆ ಮರಳಬೇಕು. ಖಾಸಗಿ ವಾಹನ ಮಾಲೀಕರು ಪ್ರಯಾಣಿಕರನ್ನು ಸುಲಿಗೆ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ಹೇಳಿಕೆಯನ್ನು ಉಲ್ಲೇಖಿಸಿ, 2021ರಲ್ಲಿ ಅಧಿಕಾರ ಇದ್ದಾಗ ಹೀಗೆ ಮಾತನಾಡುತ್ತಿದ್ದಾರೆ. ಇದಲ್ಲವೇ ರಾಜಕೀಯ ಅಂದ್ರೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಟ್ರೋಲ್ ಗೆ ಇಳಿದಿದ್ದಾರೆ.