ಬಾಗಲಕೋಟೆ : ಮಾಜಿ ಸಚಿವ ರಮೇಶ ಜಾರಕಿಹೋಳಿ ಕುರಿತು ಬಿಡುಗಡೆಯಾಗಿರುವ ಸಿಡಿ, ಎಷ್ಟು ವೇಗವಾಗಿ ಬಂತೋ ಅಷ್ಟೇ ವೇಗದಲ್ಲಿ ಮರಳಿ ಹೋಗುತ್ತದೆ. ಎಲ್ಲರೂ ಸ್ವಲ್ಪ ತಾಳ್ಮೆಯಿಂದ ಕಾಯಿರಿ ಎಂದು ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಆರ್. ಶಂಕರ ಹೇಳಿದರು.
ತೋಟಗಾರಿಕೆ ವಿವಿಯ 10ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನೂರಕ್ಕೆ ನೂರರಷ್ಟು ಸಿಡಿ ಮರಳಿ ಹೋಗುತ್ತದೆ. ಜನರು ಸಿಡಿ-ಪಿಡಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮೂರು ಉಪ ಚುನಾವಣೆಯಲ್ಲೂ ನಾವು ಗೆಲುವು ಸಾಧಿಸುತ್ತೇವೆ. ಸಿಡಿ ಬಂದ ತಕ್ಷಣ ಆರೋಪ ಸಾಬೀತಾಯಿತು ಎಂದಲ್ಲ. ಇನ್ನು ತನಿಖೆಯ ಹಂತದಲ್ಲಿದೆ. ರಮೇಶ ಜಾರಕಿಹೋಳಿ ನಿರ್ದೋಸಿಯಾಗಿ ಹೊರ ಬರುತ್ತಾರೆ ಎಂದು ಹೇಳಿದರು.
ಹಿಂದೆ ಕೂಡ ಸಿಡಿ ಬಂದಿವೆ. ಸಚಿವರಾಗಿದ್ದ ಬಾಗಲಕೋಟೆಯ ಮೇಟಿ ಅವರ ಸಿಡಿ ಬಂದಿತ್ತು. ಬೇಕಾದಾಗ ಒಂದೊಂದು ಸಿಡಿ ಬಿಡೋದು ಆಗಿದೆ. ಬಂದ ಸಿಡಿ ವಾಪಸ್ಸು ಹೋಗುತ್ತವೆ. ಮಾಜಿ ಸಚಿವ ರಮೇಶ ಜಾರಕಿಹೋಳಿ ಅವರಿಗೆ ಕೋವಿಡ್ ಬಂಧಿಸಿಲ್ಲ. ಅವರನ್ನು ಬಂಧಿಸಲು ಹೋದವರಿಗೂ ಕೋವಿಡ್ ಬರುತ್ತದೆ. ಅವರು ಗುಣಮುಖರಾದ ಬಳಿಕ ಎಲ್ಲ ಪ್ರಕ್ರಿಯೆ ನಡೆಯುತ್ತವೆ ಎಂದರು.
ನಮ್ಮ ನಿಷ್ಠೆ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರಕ್ಕೆ :
ನಮ್ಮ ನಿಷ್ಠೆ ಯಡಿಯೂರಪ್ಪ ನಾಯಕತ್ವ ಹಾಗೂ ಬಿಜೆಪಿ ಸರ್ಕಾರದ ಪರವಾಗಿದೆ. ಸಿಎಂ ಹಾಗೂ ಅವರ ಪುತ್ರನ ಬಗ್ಗೆ ಶಾಸಕ ಯತ್ನಾಳ ಪದೇ ಪದೇ ಟೀಕೆ ಮಾಡುತ್ತಿದ್ದು, ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಮಗೆ ಒಣ ಹಾಗೂ ಒಳ ರಾಜಕೀಯ ಗೊತ್ತಿಲ್ಲ. ಯಡಿಯೂರಪ್ಪ ನಾಯಕತ್ವದಲ್ಲಿ ಕೆಲಸ ಮಾಡುವುದು ಮಾತ್ರ ಗೊತ್ತು ಎಂದು ಹೇಳಿದರು.
ಸಚಿವ ಈಶ್ವರಪ್ಪ ಅವರ ದೂರಿನ ಕುರಿತು ನನಗೆ ಗೊತ್ತಿಲ್ಲ. ಇದಕ್ಕೆ ಒಂದು ವೇದಿಕೆ ಇದೆ. ನಾಯಕರು ಇದ್ದಾರೆ. ಅದರ ಬಗ್ಗೆ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ವಿರೋಧ ಇರಲಿ, ಪರ ಇರಲಿ, ಸರ್ಕಾರ ಮಾತ್ರ ಗಟ್ಟಿಯಾಗಿದೆ ಎಂದರು.
ಸಿಎಂ ಪುತ್ರ ವಿಜಯೇಂದ್ರ ಅವರು ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ನನಗೆ ಒಂದು ಬಾರಿಯೂ ಅವರು ಫೋನ್ ಕೂಡ ಮಾಡಿಲ್ಲ. ಆರೋಪ ಮಾಡುವವರು ಮಾಡಲಿ. ಈ ಬಗ್ಗೆ ಮುಖ್ಯಮಂತ್ರಿಗಳೇ ಸವಾಲು ಮಾಡಿದ್ದಾರೆ. ನಾವು ಯಡಿಯೂರಪ್ಪ ನವರ ನಾಯಕತ್ವ ಒಪ್ಪಿ ೧೭ ಜನರು ಬಂದಿದ್ದೇವೆ. ನಮ್ಮ ನಿಷ್ಠೆ ಯಡಿಯೂರಪ್ಪ ನೇತೃತ್ವ, ಬಿಜೆಪಿ ಸರ್ಕಾರದ ಪರವಾಗಿ ಇರುವುದು ನಮ್ಮ ಧ್ಯೇಯ ಎಂದು ಹೇಳಿದರು.
Laxmi News 24×7