ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹವಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಕಟ್ಟುನಿಟ್ಟಿನ ನಿಯಮವಳಿಗಳನ್ನ ಬಿಡುಗಡೆ ಮಾಡಿದ್ದು, 8 ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಶೇ. 50%ರಷ್ಟು ಭರ್ತಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಬಿಡುಗಡೆಯಾದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಚಿತ್ರಕ್ಕೆ ಭಾರೀ ಹೊಡೆತ ಬಿದ್ದಿದೆ. ಚಿತ್ರತಂಡ ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದೆ.
ಸರ್ಕಾರದ ಈ ನಿರ್ಧಾರದ ಬಗ್ಗೆ ಬೇಸರದಲ್ಲಿಯೇ ಮಾತನಾಡಿದ ಪುನೀತ್, ‘ಚಿತ್ರಮಂದಿರಗಳಲ್ಲಿ 50% ಸೀಟು ಭರ್ತಿಗೆ ಮಾತ್ರ ಅವಕಾಶ ವಿಚಾರ 3-4 ದಿನಗಳ ಹಿಂದೆಯೇ ಗೊತ್ತಿದ್ರೆ ನಾವು ಸಿನಿಮಾ ಬಿಡುಗಡೆ ಮಾಡ್ತಿರಲಿಲ್ಲ. ಮುಂದಕ್ಕೆ ಹಾಕ್ತಿದ್ದಿವಿ. ಸರ್ಕಾರದ ಟ್ವೀಟ್ ನೋಡಿಯೇ ರಿಲೀಸ್ ಮಾಡಿದ್ದೇವೆ. ಈ ವಿಚಾರ 31ರಾತ್ರಿ ಗೊತ್ತಾಗಿದ್ರ ಕೂಡ ಸಿನಿಮಾ ರಿಲೀಸ್ ಮಾಡ್ತಿರಲಿಲ್ಲ. ಈಗ ಸಿನಿಮಾ ರಿಲೀಸ್ ಆಗಿ ಒಳ್ಳೆ ಅಭಿಪ್ರಾಯ ಬಂದು, ಕಲೆಕ್ಷನ್ ಬರುವಾಗ ಹೀಗೆ ಮಾಡಿದ್ರೆ ಒಂದು ಒಳ್ಳೆ ಕನ್ನಡ ಸಿನಿಮಾನ ಕೊಲೆ ಮಾಡಿದಂತೆ’ ಎಂದಿದ್ದಾರೆ.
ಇನ್ನು ಚಿತ್ರ ಬಿಡುಗಡೆಯಾಗಿ ಎರಡು ದಿನ ಮಾತ್ರ ಕಳೆದಿದೆ. ಜನ ಫ್ಯಾಮಿಲಿ ಸಮೇತರಾಗಿ ಸಿನಿಮಾ ನೋಡೋಕೆ ಬರ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಈ ರೀತಿಯಾದ ನಿರ್ಧಾರ ಮಾಡಿರೋದು ನಮಗೆ ಶಾಕ್ ನೀಡಿದೆ. ಭಾನುವಾರದವರೆಗೂ ಟಿಕೆಟ್ ಬುಕ್ ಆಗಿದ್ದು, ಜನ ಗೊಂದಲಕ್ಕೊಳಗಾಗುತ್ತಾರೆ. ನಮ್ಗೆ ಏನ್ ಮಾಡ್ಬೇಕು ಅನ್ನೋದೆ ಗೊತ್ತಾಗ್ತಿಲ್ಲ. ದಯವಿಟ್ಟು ಕೆಲವು ದಿನಗಳ ಕಾಲ ಈ ನಿಯಮವನ್ನ ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.