ಹುಬ್ಬಳ್ಳಿ, ಮಾರ್ಚ್ 30: “ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂರಕ್ಕೆ ನೂರರಷ್ಟು ಸ್ಪರ್ಧಿಸುವುದಿಲ್ಲ” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದರು.
ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ, “ವಿಪಕ್ಷ ನಾಯಕ ಸಿದ್ದರಾಮಯ್ಯ ಎಲ್ಲ ವಿಷಯಗಳಲ್ಲೂ ದ್ವಂದ್ವ ನಿಲುವು ಪ್ರದರ್ಶಿಸುತ್ತಾರೆ” ಎಂದು ವ್ಯಂಗ್ಯವಾಡಿದರು.
ಕಳೆದ ಬಾರಿಯ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವುದಿಲ್ಲ ಎಂದು ಸಿದ್ದರಾಮ್ಯಯ ಹೇಳಿದ್ದರು. ಆದರೆ, ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದರು. ಈ ಬಾರಿ ಮತ್ತೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಅವರು ಈ ಬಾರಿ ನೂರಕ್ಕೆ ನೂರರಷ್ಟು ಸ್ಪರ್ಧೆ ಮಾಡುವುದಿಲ್ಲ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.
ಸಿಡಿ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡುತ್ತಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಈಶ್ವರಪ್ಪ, ಕಾಂಗ್ರೆಸ್‌ನಂತೆಯೇ ಸಿದ್ದರಾಮಯ್ಯ ಕೂಡ ಡಬಲ್ ಸ್ಟ್ಯಾಂಡರ್ಡ್ ನಿಲವು ಪ್ರದರ್ಶಿಸುತ್ತಾರೆ ಎಂದು ಕಿಡಿಕಾರಿದರು.
ಇನ್ನು ಬೆಳಗಾವಿ ಲೋಕಸಭೆ ಹಾಗೂ ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಗೆಲುವು ಖಚಿತ ಎಂದ ಈಶ್ವರಪ್ಪ, ಎಲ್ಲಾ ಉಪ ಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನ ನಮಗೆ ಬಹುಮತ ನೀಡಿದ್ದರೆ ಈ ಗೊಂದಲವಾಗುತ್ತಿರಲಿಲ್ಲ. ಆದರೂ ಉಪ ಚುನಾವಣೆಯಲ್ಲಿ ಪಕ್ಷ ಜಯ ಸಾಧಿಸಿ ಸರ್ಕಾರವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ನಮ್ಮ ಸಂಘಟನಾ ಶಕ್ತಿ ನೋಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ದಿಕ್ಕು ತೋಚುತ್ತಿಲ್ಲ. ಈ ಸಂಘಟನೆಯ ಬಲದಿಂದಲೇ ನಾವು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಸಚಿವ ಈಶ್ವರಪ್ಪ ಹೇಳಿದರು.
ಇನ್ನು ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಕುರಿತು ಕೇಳಿದ ಪ್ರಶ್ನೆಗೆ, ಉತ್ತರ ನೀಡಲು ನಿರಾಕರಿಸಿದ ಈಶ್ವರಪ್ಪ, ಪತ್ರಕರ್ತರನ್ನು ಉದ್ದೇಶಿಸಿ “”ನಿಮ್ಮ ಕೈ ಮುಗಿದು ಕೇಳಿಕೊಳ್ಳುತ್ತೇನೆ ಅದೊಂದು ವಿಷಯ ಬಿಟ್ಟು ಬೇರೆ ಏನಾದರೂ ಕೇಳಿ” ಎಂದು ಮನವಿ ಮಾಡಿಕೊಂಡರು.