ಬೆಂಗಳೂರು, ಮಾರ್ಚ್ 24: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯ ಸಚಿವ ಡಾ.ಸುಧಾಕರ್ ಅವರ ‘ಏಕಪತ್ನೀವ್ರತಸ್ಥ’ ಹೇಳಿಕೆ ರಂಪ ರಾಮಾಯಣವಾಗಿ, ಕೊನೆಗೆ ಸಚಿವರು ಕ್ಷಮೆಯಾಚನೆ ಮಾಡಿದ್ದಾರೆ.
“ನನ್ನ ಹೇಳಿಕೆ ಯನ್ನು ಅರ್ಥ ಮಾಡಿಕೊಳ್ಳಬೇಕಾದ ಮಹಾನಾಯಕರುಗಳು ಅರ್ಥ ಮಾಡಿಕೊಂಡರೆ ಸಾಕು. ಇಡೀ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆದು ರಾಜಕೀಯ ದ್ವೇಷ ಸಾಧಿಸಲು ಹೊರಟಿರುವ ಮಹಾನಾಯಕರ ಮುಖವಾಡ ಕಳಚುವ ಉದ್ದೇಶ ನನ್ನ ಹೇಳಿಕೆಯ ಹಿಂದೆ ಇತ್ತು ಅಷ್ಟೇ. ನಮ್ಮಗಳ ತೇಜೋವಧೆ ಮಾಡಲು ಹೊರಟವರ ಉದ್ದೇಶ ಈಡೇರಲ್ಲ”ಎಂದು ಸುಧಾಕರ್ ಟ್ವೀಟ್ ಮಾಡಿದ್ದರು.
ಇದಕ್ಕೆ ಖಾರವಾಗಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಕೆಪಿಸಿಸಿ, ಬೇರೊಬ್ಬರ ಹೆಂಡತಿಯರ ಬಗ್ಗೆ ಲೆಕ್ಕ ಹಾಕುವ ಮೊದಲು, ಕೊರೊನಾ ಕೇಸ್ ಅನ್ನು ಲೆಕ್ಕಹಾಕಿಕೊಳ್ಳಿ ಎನ್ನುವ ಸಲಹೆಯನ್ನು ನೀಡಿದೆ.
ಕೆಪಿಸಿಸಿ ಮಾಡಿರುವ ಟ್ವೀಟ್ ಹೀಗಿದೆ, “@mla_sudhakar ಅವರೇ, ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತರುವ ಮೂಲಕ ನೀವು ಏಕಪತ್ನಿ ವ್ರತಸ್ಥರಲ್ಲ ಎನ್ನುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದೀರಿ”.
“ಶ್ರೀರಾಮನ ಮೇಲೆ ನಂಬಿಕೆ ಇದ್ದರೆ ರಾಜೀನಾಮೆ ಕೊಟ್ಟು ಕಳಂಕ ತೊಳೆದುಕೊಂಡು ಬನ್ನಿ, ಅಂದಹಾಗೆ ಕಂಡವರ ಹೆಂಡಿರ ಲೆಕ್ಕ ಹಾಕುವ ಮೊದಲು ರಾಜ್ಯದಲ್ಲಿ ಏರುತ್ತಿರುವ ಕೊರೊನಾ ಕೇಸ್‌ಗಳ ಲೆಕ್ಕ ಗಮನಿಸಿ”ಎಂದು ಕೆಪಿಸಿಸಿ ಟ್ವಿಟ್ಟರ್ ವ್ಯಂಗ್ಯವಾಡಿದೆ.
ಮುಂದುವರಿಯುತ್ತಾ, “@BJP4Karnataka ಪಕ್ಷದವರೇ, ನೀವು ನಿಜವಾಗಿಯೂ ಶ್ರೀರಾಮನ ಭಕ್ತರೇ ಆಗಿದ್ದರೆ, ರಾಮನ ಆದರ್ಶ ಪಾಲಿಸಿ. ಮೊದಲು ನೀವು ವಿಧಾನಸೌಧದ ಎದುರು ಅಗ್ನಿಪರೀಕ್ಷೆ ಎದುರಿಸಿ, ತಾವೆಲ್ಲಾ ಪವಿತ್ರರು ಎಂದು ನಿರೂಪಿಸಿ. ಇಲ್ಲವಾದಲ್ಲಿ 6 ಸಿಡಿ ಕಳಂಕಿತ ಸಚಿವರ ರಾಜೀನಾಮೆ ಪಡೆಯಿರಿ”ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.
Laxmi News 24×7