Breaking News

ಎಲ್ಲರ ಮೇಲೆ ಆರೋಪ ಮಾಡೋದು ಸರಿಯಲ್ಲ; ಡಾ. ಸುಧಾಕರ್ ಹೇಳಿಕೆಗೆ ಸಚಿವೆ ಶಶಿಕಲಾ ಜೊಲ್ಲೆ ಕಿಡಿ

Spread the love

ಬೆಂಗಳೂರು (ಮಾ. 24): ಯಾವೆಲ್ಲ ಸಚಿವರು, ಶಾಸಕರು ಏಕಪತ್ನಿವ್ರತಸ್ಥರು ಎಂಬುದು ಗೊತ್ತಾಗಲಿ, ಎಲ್ಲ 224 ಶಾಸಕರದ್ದೂ ತನಿಖೆಯಾಗಲಿ ಎಂಬ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಯಾರಿಗೆಲ್ಲ ಅನೈತಿಕ ಸಂಬಂಧವಿದೆ, ಯಾವ ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಧಿಯಲ್ಲಿ ಏನೆಲ್ಲ ಮಾಡಿದ್ದರು ಎಂಬುದು ತನಿಖೆಯಾಗಲಿ ಎಂದು ಡಾ. ಸುಧಾಕರ್ ಹೇಳಿದ್ದರು. ಇದಕ್ಕೆ ಈಗಾಗಲೇ ಡಿ.ಕೆ. ಶಿವಕುಮಾರ್, ಸೌಮ್ಯಾ ರೆಡ್ಡಿ, ಹೆಚ್​.ಡಿ. ರೇವಣ್ಣ ಸೇರಿದಂತೆ ವಿಪಕ್ಷಗಳ ಅನೇಕ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಸಚಿವ ಸುಧಾಕರ್ ಅವರ ಹೇಳಿಕೆಗೆ ಬಿಜೆಪಿ ನಾಯಕರಿಂದಲೇ ಆಕ್ಷೇಪ ವ್ಯಕ್ತವಾಗಿದೆ.

ಯಾರೆಲ್ಲ ಏಕಪತ್ನಿ ವ್ರತಸ್ಥರು, ಸತ್ಯವಂತರಿದ್ದಾರೆ ಎಂಬುದು ಬಯಲಾಗಲಿ. ಎಲ್ಲ ಶಾಸಕರದ್ದೂ ತನಿಖೆಯಾಗಲಿ ಎಂಬ ಸಚಿವ ಡಾ. ಕೆ. ಸುಧಾಕರ್ ಅವರ ಹೇಳಿಕೆಗೆ ಅವರದ್ದೇ ಸರ್ಕಾರದ ಸಚಿವೆ ಶಶಿಕಲಾ ಜೊಲ್ಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ಪುರುಷರು ಮಾತ್ರವಲ್ಲ, ಸದನಕ್ಕೆ ನಾವು ಶಾಸಕಿಯರೂ ಬರುತ್ತೇವೆ. ಹೀಗಿರುವಾಗ ಎಲ್ಲ ಶಾಸಕರ ಮೇಲೆ ಆರೋಪ ಮಾಡಿ ಆ ರೀತಿ ಹೇಳಿಕೆ ನೀಡಿರುವುದು ತಪ್ಪು ಎಂದು ಶಶಿಕಲಾ ಜೊಲ್ಲೆ ಡಾ. ಸುಧಾಕರ್ ಮೇಲೆ ಕಿಡಿ ಕಾರಿದ್ದಾರೆ. ಸಚಿವ ಡಾ. ಕೆ. ಸುಧಾಕರ್ ಹೇಳಿಕೆಗೆ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಕೂಡ ಪ್ರತಿಕ್ರಿಯೆ ನೀಡಿದ್ದು, ಸುಧಾಕರ್ ಅವರಿಗೆ ಮಾಡೋಕೆ‌ ಏನೂ ಕೆಲಸ‌ ಇಲ್ವಾ? ಓರ್ವ ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ ಅಂತ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ಯಾಕೆ ಪ್ರತಿಭಟನೆ ಮಾಡ್ತಾ ಇದ್ದೇವೆ ಅಂತ ಅರ್ಥ ಮಾಡಿಕೊಳ್ಳಿ. ತಪ್ಪಿತಸ್ಥರು ಯಾರೇ ಆಗಿರಲಿ, ಈ ಪ್ರಕರಣ ಸಿಬಿಐಗೆ ಹೋಗಲಿ. ಸುಧಾಕರ್ ಅವರ ಹೇಳಿಕೆಯನ್ನು ನೋಡಿ ಜನರು ನಗುತ್ತಿದ್ದಾರೆ. ಶಾಸಕಿಯರಿಗೂ ಪತ್ನಿ ಇರುತ್ತಾರಂತಾ? ಎಂದು ಸುಧಾಕರ್ ಅವರ ಏಕಪತ್ನಿವ್ರತಸ್ಥ ಎಂಬ ಹೇಳಿಕೆಗೆ ಸೌಮ್ಯಾ ರೆಡ್ಡಿ ನಕ್ಕು ಲೇವಡಿ ಮಾಡಿದ್ದಾರೆ.

ಇನ್ನು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಪ್ರತಿಕ್ರಿಯಿಸಿದ್ದು, ನನಗೆ ಇರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ. ಅದರಲ್ಲಿ ತನಿಖೆ ಮಾಡುವಂಥದ್ದು ಏನೂ ಇಲ್ಲ ಎಂದಿದ್ದಾರೆ.

ಇಂದು ಅಧಿವೇಶನಕ್ಕೆ ಹೋಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಯಾವ್ಯಾವ ಮುಖ್ಯಮಂತ್ರಿಗಳು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು ಎಲ್ಲವೂ ತನಿಖೆ ಆಗಲಿ ಎಂದು ಸಲಹೆ ನೀಡಿದ್ದಾರೆ. ಯಾರಿಗೆಲ್ಲಾ ಅನೈತಿಕ ಸಂಬಂಧ ಇದೆ ಎಂಬುದು ತಿಳಿಯಲಿ. ಎಲ್ಲಾ ಮಂತ್ರಿಗಳದ್ದು, ವಿರೋಧ ಪಕ್ಷಗಳವರದ್ದು ತನಿಖೆ ಅಗಲಿ. ಎಲ್ಲಾ 224 ಶಾಸಕರದ್ದೂ ತನಿಖೆ ಆಗಿ ಹೋಗಲಿ. ಯಾರು ಎಂಥವರು ಎಂಬ ಸತ್ಯ ಜನರಿಗೆ ಗೊತ್ತಾಗಲಿಎಂದಿದ್ದರು.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕುಮಾರಣ್ಣ ಅವರೆಲ್ಲಾ ಸತ್ಯ ಹರಿಶ್ಚಂದ್ರರು. ರಮೇಶ್ ಕುಮಾರ್ ಕೂಡ ಸತ್ಯ ಹರಿಶ್ಚಂದ್ರರಿದ್ದಾರೆ. ಇವರೆಲ್ಲರೂ ಏಕಪತ್ನಿ ವ್ರತವನ್ನ ಬಹಳ ಮಾಡುತ್ತಿದ್ದಾರೆ. ಎಲ್ಲಾ 224 ಶಾಸಕರದ್ದು ತನಿಖೆ ಆಗಲಿ ಎಂಬ ನನ್ನ ಪ್ರಸ್ತಾಪವನ್ನು ಇವರು ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದ್ದರು. ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ