ಬೆಂಗಳೂರು, ಮಾ.20- ಸಿಡಿ ವಿವಾದದಿಂದ ತೀವ್ರ ಮುಜುಗರಕ್ಕೆ ಸಿಲುಕಿರುವ ಜಾರಕಿಹೊಳಿ ಸಹೋದರರು ನಿನ್ನೆ ತಡರಾತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಾವೇರಿಯಲ್ಲಿ ತಡರಾತ್ರಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ತೆರಳಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಿಎಂ ಜತೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಸಿದಂತೆ ಸಿಎಂ ಹಾಗೂ ಗೃಹ ಸಚಿವರಿಗೆ ಎಲ್ಲ ಮಾಹಿತಿಯನ್ನು ನೀಡಿರುವ ಜಾರಕಿಹೊಳಿ ಸಹೋದರರು ಕಾನೂನಾತ್ಮಕವಾಗಿಯೇ ನಾವು ಹೋರಾಟ ನಡೆಸಲಿದ್ದೇವೆ. ಸದ್ಯಕ್ಕೆ ನಮ್ಮನ್ನು ಕೈಬಿಡಬಾರದು ಎಂದು ಮನವಿ ಮಾಡಿದ್ದಾರೆ.
ಸೋಮವಾರ ಪ್ರತಿಪಕ್ಷ ಕಾಂಗ್ರೆಸ್ ವಿಧಾನ ಮಂಡಲದಲ್ಲಿ ಈ ವಿಷಯ ಪ್ರಸ್ತಾಪಿಸಿದರೆ ನಾವು ಉತ್ತರ ಕೊಡಲು ಸಿದ್ಧರಿದ್ದೇವೆ. ಸರ್ಕಾರದಿಂದ ನಮಗೆ ಕಾನೂನು ನೆರವು ಬೇಕು ಎಂದು ಕೋರಿದ್ದಾಗಿ ತಿಳಿದುಬಂದಿದೆ. ಈಗಾಗಲೇ ಎಸ್‍ಐಟಿ ತನಿಖೆ ನಡೆಯುತ್ತಿದ್ದು, ಹಲವು ವಿಷಯಗಳು ಬಹಿರಂಗಗೊಂಡಿವೆ.
ಮುಂದೆಯೂ ನಿಮಗೆ ಎಲ್ಲ ರೀತಿಯ ಕಾನೂನು ಸಹಕಾರ ನೀಡುವುದಾಗಿ ಸಿಎಂ ಅಭಯ ನೀಡಿದ್ದಾರೆಂದು ಗೊತ್ತಾಗಿದೆ.ಸಿಎಂ ಭೇಟಿ ಮಾಡಿದ ಬಳಿಕ ನೇರವಾಗಿ ರಮೇಶ್ ಜಾರಕಿಹೊಳಿ ಭೇಟಿ ಮಾಡಿದ ಬಾಲಚಂದ್ರ ಜಾರಕಿಹೊಳಿ, ಎಸ್ ಐಟಿ ತನಿಖಾ ಹಾದಿಯ ಬಗ್ಗೆ ಚರ್ಚಿಸಿದ್ದಾರೆ.
ಖಾಸಗಿ ಏಜೆನ್ಸಿ ಮೂಲಕ ಸಂಗ್ರಹಿಸಿರುವ ದಾಖಲೆಗಳನ್ನು ಅಗತ್ಯ ಸಂದರ್ಭದಲ್ಲಿ ಬಳಸಬಹುದು, ಸಿಡಿಯಲ್ಲಿರುವ ಯುವತಿ ವ್ಯತಿರಿಕ್ತ ಹೇಳಿಕೆ ಬಿಡುಗಡೆ ಮಾಡಿದರೂ ಧೃತಿಗೆಡಬೇಕಾಗಿಲ್ಲ. ನಮ್ಮ ಬಳಿ ಇರುವ ದಾಖಲೆಗಳ ಮೂಲಕವೇ ಪ್ರಕರಣವನ್ನು ಎದುರಿಸಬಹುದು.
ನಾನು ಮತ್ತೊಮ್ಮೆ ಗೃಹಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿಗೆ ಧೈರ್ಯ ತುಂಬಿದ್ದಾರೆ. ನಾಳೆ ಸಂಜೆ ವೇಳೆಗೆ ಮತ್ತೊಮ್ಮೆ ಗೃಹಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲು ಜಾರಕಿಹೊಳಿ ಸಹೋದರರು ತೀರ್ಮಾನ ಮಾಡಿದ್ದಾರೆ.