ಬೆಳಗಾವಿ : ಆ ಯುವತಿ ವಿಡಿಯೋದಲ್ಲಿ ಹೇಳಿಕೆ ನೀಡಿದರೆ ಸಾಲದು, ಅಧಿಕೃತವಾಗಿ ಮುಂದೆ ಬಂದು ತನಗಾದ ಅನ್ಯಾಯದ ಬಗ್ಗೆ ಹೇಳಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸಿಡಿ ಪ್ರಕರಣದ ಕುರಿತು ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಗೆ ಮುಂದೆ ಬಂದು ಹೇಳಿದ್ದಾರೋ ಹಾಗೆಯೇ ಆ ಯುವತಿ ಕೂಡ ಮುಂದೆ ಬಂದು ತನಗಾದ ಅನ್ಯಾಯದ ಬಗ್ಗೆ ಹೇಳಿಕೊಳ್ಳಬೇಕು ಆಗ ಮಾತ್ರ ಸಮಸ್ಯೆ ಬಗೆಹರಿಯುತ್ತದೆ ಎಂದರು.
ಆ ಯುವತಿಗೆ ವೇದಿಕೆಗಳಿವೆ, ಹೋರಾಟ ಮಾಡಬಹುದು. ಅದನ್ನು ಬಿಟ್ಟು ವಿಡಿಯೋ ಮಾಡಿ ಹೇಳಿಕೆ ನೀಡಿದ್ರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಯುವತಿ ಮುಂದೆ ಬಂದು ಹೇಳಿಕೆ ನೀಡಿದರೆ ಪೊಲೀಸರು ಸತ್ಯಾಂಶವನ್ನು ಕಂಡುಹಿಡಿಯಲು ಸಹಕಾರಿ ಆಗುತ್ತದೆ. ಎಲ್ಲೋ ಕುಳಿತು ವಿಡಿಯೋ ಕಳುಹಿಸಿದರೆ ಆಗುವುದಿಲ್ಲ. ಈಗಾಗಲೇ ರಮೇಶ್ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂದರು.