ಬೆಂಗಳೂರು, ಮಾ.14- ಸಾಮಾಜಿಕ ಜಾಲತಾಣಗಳ ವಿಡಿಯೋ ತುಣುಕುಗಳನ್ನಾಧರಿಸಿ ದೂರು ದಾಖಲಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾದ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡು ಜೀವಭಯವಿದೆ, ಭದ್ರತೆ ನೀಡುವಂತೆ ಗೃಹ ಸಚಿವರಿಗೆ ಮನವಿ ಮಾಡಿಕೊಂಡ ಹೇಳಿಕೆ ಆಧರಿಸಿ ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಯಾವುದೇ ಒಬ್ಬ ವ್ಯಕ್ತಿ ತಮಗಾದ ಅನ್ಯಾಯದ ವಿರುದ್ಧ ದೂರು ನೀಡಬೇಕಾದರೆ ಪೊಲೀಸರೆದುರು ಖುದ್ದು ಹಾಜರಾಗಬೇಕು. ಇಲ್ಲವೆ ಅವರ ಕುಟುಂಬ ವರ್ಗದವರು ಅಥವಾ ಆಪ್ತರ ಬಳಿ ದೂರು ಕಳುಹಿಸಿ ಮಾಹಿತಿ ನೀಡಿದಾಗ ಮಾತ್ರ ದೂರು ದಾಖಲಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ.ಸಿಡಿ ಪ್ರಕರಣದಲ್ಲಿ ಯುವತಿ ಪೊಲೀಸರೆದುರು ಖುದ್ದು ಹಾಜರಾಗಿ ದೂರು ನೀಡಬೇಕು. ಇಲ್ಲವೆ ಅವರ ಕುಟುಂಬ ವರ್ಗದವರನ್ನು ಕಳುಹಿಸಿದರೆ ವಿಚಾರಣೆ ನಡೆಸಿ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.