ಬೆಂಗಳೂರು: ಬುಧವಾರ ಬೆಳಗ್ಗೆಯಿಂದ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಲಿದ್ದು, 1500 ಬಸ್ಸುಗಳು ಸಂಚರಿಸಲಿವೆ. ಬಿಎಂಟಿಸಿ ಅಧಿಕೃತ ಆದೇಶ ಹೊರಡಿಸಿದೆ.
ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಲ್ಲ ಕಡೆ ಬಸ್‍ಗಳು ಓಡಾಡಲಿದ್ದು, ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಡ್ರೈವರ್ ಮತ್ತು ಕಂಡಕ್ಟರ್ ಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿದ್ದು, ಮಾಸ್ಕ್ ಧರಿಸಿ ಬರುವ ಪ್ರಯಾಣಿಕರರಿಗೆ ಮಾತ್ರ ಬಸ್ ನಲ್ಲಿ ಪ್ರಯಾಣಿಸಲು ತಿಳಿಸಲಾಗಿದೆ.
ಜ್ವರ ಮತ್ತು ಬೇರೆ ರೋಗದಿಂದ ಬಳಲುತ್ತಿರುವವರು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡಲು ಅವಕಾಶವಿಲ್ಲ. ಕೊರೊನಾದ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಬಿಎಂಟಿಸಿ ಸೂಚಿಸಿದೆ.
ಲಾಕ್‍ಡೌನ್ ತೆರವು ಕುರಿತು ರಾಜ್ಯವನ್ನು ಉದ್ದೇಶಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಕೊರೊನಾ ನಿಯಂತ್ರಿಸಲು ಲಾಕ್‍ಡೌನ್ ಒಂದೇ ಪರಿಹಾರವಲ್ಲ, ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಮೂಲಕ ಕೊರೊನಾ ನಿಯಂತ್ರಿಸಲು ಜನರು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ. ಅಲ್ಲದೆ ನಾಳೆಯಿಂದ ಬೆಂಗಳೂರಿನಲ್ಲಿ ಲಾಕ್‍ಡೌನ್ ಇರುವುದಿಲ್ಲ. ಜನರ ರಕ್ಷಣೆಯ ಜೊತೆ ಸರ್ಕಾರಕ್ಕೆ ಆರ್ಥಿಕ ಸಂಪನ್ಮೂಲ ಅಗತ್ಯವಿದೆ. ಹೀಗಾಗಿ ಬೆಂಗಳೂರು ಮಾತ್ರ ಅಲ್ಲ ರಾಜ್ಯದ ಎಲ್ಲೂ ಲಾಕ್‍ಡೌನ್ ಮಾಡುವುದಿಲ್ಲ. ಆದರೆ ಕಂಟೈನ್ಮೆಂಟ್ ವಲಯದಲ್ಲಿ ನಿಯಮ ಬಿಗಿ ಇರುತ್ತದೆ ಎಂದು ಸ್ಪಷ್ಟಪಡಿಸಿದರು.